ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದೊಳಗಿನ ಬೇಗುದಿ ಒಂದೊಂದಾಗಿ ಹೊರಬರಲಾರಂಭಿಸಿದೆ. ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಸರಿಸುಮಾರು 20 ಮಂದಿ ಶಾಸಕರ ವೈ-ಕೆಟಗರಿ ಭದ್ರತೆಯನ್ನು ಏಕಾಏಕಿ ರಾಜ್ಯ ಗೃಹ ಇಲಾಖೆ ವಾಪಸ್ ಪಡೆದಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಗೃಹ ಖಾತೆಯನ್ನು ನಿಭಾಯಿಸುತ್ತಿರುವುದು ಗಮನಾರ್ಹ ಸಂಗತಿ. ಈ ಬೆಳವಣಿಗೆಯು ಮಹಾಯುತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುಳಿವನ್ನು ನೀಡಿದೆ.
ಇನ್ನೊಂದೆಡೆ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಕೆಲವು ಶಾಸಕರ ಭದ್ರತೆಯನ್ನೂ ವಾಪಸ್ ಪಡೆಯಲಾಗಿದೆಯಾದರೂ ಆ ಸಂಖ್ಯೆ ಬಹಳ ಕಡಿಮೆಯಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಸಂಪನ್ಮೂಲಗಳ ದುರ್ಬಳಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೆಲವು ಶಾಸಕರಿಗೆ ಸಚಿವ ಸ್ಥಾನ ಇರದೇ ಇದ್ದರೂ ಹೆಚ್ಚುವರಿ ಸೌಲಭ್ಯವಾಗಿ ವೈ ಭದ್ರತೆಯನ್ನು ಕಲ್ಪಿಸಲಾಗಿತ್ತು. 2022ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಿಂದ ಪಕ್ಷಾಂತರಗೊಂಡ ಸಂದರ್ಭದಲ್ಲಿ ಈ ಶಾಸಕರಿಗೆಲ್ಲ ವೈ ಭದ್ರತೆ ಒದಗಿಸಲಾಗಿತ್ತು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇನ್ನೊಂದು ಕಡೆ, ತನ್ನ ಅಧಿಕಾರವನ್ನು ಖಾತ್ರಿಪಡಿಸಲೆಂದೇ ಫಡ್ನವೀಸ್ ಅವರು ಈ ತಂತ್ರ ಹೆಣೆದಿದ್ದಾರೆ ಎಂಬ ಮಾತುಗಳೂ ಕೇಳಿಬರತೊಡಗಿವೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರವು ಶಿಂಧೆ ಸೇನೆ ಮತ್ತು ಬಿಜೆಪಿ ನಡುವಿನ ಮುಸುಕಿನ ಗುದ್ದಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.
ರಾಯಗಡ ಮತ್ತು ನಾಸಿಕ್ ಉಸ್ತುವಾರಿ ಸಚಿವರ ನೇಮಕದ ವಿಚಾರದಲ್ಲೂ ಬಿಜೆಪಿ ಮತ್ತು ಶಿಂಧೆ ಸೇನೆ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಈ ವಿವಾದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕಳೆದ ತಿಂಗಳು ವಿಶ್ವ ಆರ್ಥಿಕ ಶೃಂಗಕ್ಕೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿ ಫಡ್ನವೀಸ್ ಅವರು ಎನ್ಸಿಪಿ ನಾಯಕ ತತ್ಕರೆ ಅವರನ್ನು ರಾಯಗಡ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದರು. ಇದು ಶಿಂಧೆ ಸೇನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದಾಗಿನಿಂದಲೂ ತಮ್ಮಿಂದ ಮುಖ್ಯಮಂತ್ರಿ ಸ್ಥಾನವನ್ನು ಕಸಿಯಲಾಗಿದೆ ಎಂಬ ಸಿಟ್ಟು ಶಿಂಧೆಯನ್ನು ಕಾಡುತ್ತಿದೆ. ಹೀಗಿರುವಾಗ ರಾಯಗಡದಲ್ಲಿ ತಮ್ಮ ಪಕ್ಷವನ್ನು ಬಲಪಡಿಸಲು ಶಿಂಧೆ ಯತ್ನಿಸುತ್ತಿರುವಂತೆಯೇ ಅಲ್ಲಿನ ಉಸ್ತುವಾರಿಯನ್ನು ಎನ್ಸಿಪಿಗೆ ವಹಿಸಿರುವುದಕ್ಕೆ ಶಿಂಧೆ ಕೆಂಡಾಮಂಡಲರಾಗಿದ್ದಾರೆ. ಇದಿಷ್ಟೇ ಅಲ್ಲ, ಶಿಂಧೆ ಅವರು ಇತ್ತೀಚೆಗೆ ಫಡ್ನವೀಸ್ ಜೊತೆ ವೇದಿಕೆ ಹಂಚಿಕೊಳ್ಳಲೂ ನಿರಾಕರಿಸುತ್ತಿದ್ದಾರೆ.