ನವದೆಹಲಿ: ಭಾರತದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮನ್ನು ಟೆಸ್ಟ್ ತಂಡದಿಂದ ಹೊರಗಿಟ್ಟ ಬಳಿಕವೂ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸಂವಹನ ಮಾಡಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ತಾವಿನ್ನೂ ಭಾರತಕ್ಕಾಗಿ ಆಡಲು ಬಯಸುತ್ತಿದ್ದು, ತಂಡಕ್ಕೆ ಮರಳಲು ಶ್ರಮಿಸುತ್ತಿದ್ದೇನೆ ಎಂದಿದ್ದಾರೆ.
ಒಮ್ಮೆ ಭಾರತ ತಂಡದ ಪ್ರಮುಖ ಟೆಸ್ಟ್ ಆಟಗಾರನಾಗಿದ್ದ ರಹಾನೆ, ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ತಂಡದ ಉಪನಾಯಕನಾಗಿ ಸೇವೆ ಸಲ್ಲಿಸಿದ್ದರು. ಆದರೆ, ನಿರಂತರ ಬ್ಯಾಟಿಂಗ್ ವೈಫಲ್ಯ ಅವರ ಸ್ಥಾನವನ್ನು ದುರ್ಬಲಗೊಳಿಸಿ ಅವರು ತಂಡದಿಂದ ಹೊರಗುಳಿಯುವಂತೆ ಮಾಡಿತು.
ಮಧ್ಯಮ ಕ್ರಮಾಂಕದ ಈ ಬ್ಯಾಟರ್ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು, 89 ಮತ್ತು 46 ರನ್ ಗಳಿಸಿ ಭಾರತದ ಪರ ಉತ್ತಮ ಆಟಗಾರ ಎನಿಸಿಕೊಂಡಿದ್ದರು. ಆದರೆ, ಅದರ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿ, ತಂಡದಿಂದ ಹೊರಗುಳಿದರು.
ಅಜಿತ್ ಅಗಾರ್ಕರ್ ವಿರುದ್ಧ ರಹಾನೆ ವಾಗ್ದಾಳಿ
‘ಇಂಡಿಯನ್ ಎಕ್ಸ್‌ಪ್ರೆಸ್’ ಜೊತೆ ಮಾತನಾಡಿದ ರಹಾನೆ, ಟೆಸ್ಟ್ ತಂಡದಿಂದ ತಾನು ಹೊರಗುಳಿಯುವ ಬಗ್ಗೆ ಆಯ್ಕೆ ಸಮಿತಿಯಿಂದ ಯಾವುದೇ ಸಮಾಧಾನಕರ ಮಾಹಿತಿ ಸಿಕ್ಕಿಲ್ಲ ಎಂದು ವಿಷಾದಿಸಿದ್ದಾರೆ.
“ನಾನು ಆಯ್ಕೆ ಸಮಿತಿಯ ಬಳಿ ಹೋಗಿ ‘ನಾನು ಏಕೆ ಹೊರಗೆ ಉಳಿದಿದ್ದೇನೆ ಎಂದು ಕೇಳುವ ವ್ಯಕ್ತಿ ಅಲ್ಲ. ಯಾವುದೇ ಸಂವಹನ ಇರಲಿಲ್ಲ. ಅನೇಕರು ‘ಹೋಗಿ ಕೇಳಿ’ ಎಂದರು, ಆದರೆ ಒಬ್ಬರು ಮಾತಾಡಲು ಸಿದ್ಧರಿದ್ದಾಗ ಮಾತ್ರ ಮಾತನಾಡಬಹುದು. ಅವರು ಸಿದ್ಧರಾಗಿಲ್ಲ ಎಂದರೆ , ಅದರಲ್ಲಿ ಅರ್ಥವಿಲ್ಲ. ನಾನು ಅವರೊಂದಿಗೆ ನೇರವಾಗಿ ಮಾತಾಡಲು ಬಯಸುತ್ತಿದ್ದೆ,” ಎಂದು ರಹಾನೆ ಹೇಳಿದ್ದಾರೆ.
ಕಿರಿಯರಿಗೆ ಸ್ಥಾನ
ಅಜಿತ್ ಅಗರ್ಕರ್ ನೇತೃತ್ವದ ಹೊಸ ಆಯ್ಕೆ ಸಮಿತಿ, ಹಿರಿಯ ಆಟಗಾರರನ್ನು ಹಿಂದಕ್ಕೆ ಸರಿಸಿ, ಯುವ ಆಟಗಾರರನ್ನು ಆಯ್ಕೆ ಮಾಡುವ ತೀರ್ಮಾನ ಕೈಗೊಂಡಿತ್ತು. ರಹಾನೆ ಅವರ ಸ್ಥಾನಕ್ಕೆ ಸರ್ಫರಾಜ್ ಖಾನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಸೇರಿಸಲಾಯಿತು. ಆದರೆ ಈ ಇಬ್ಬರೂ ತಮ್ಮ ಸ್ಥಾನವನ್ನು ದೃಢಪಡಿಸಲು ವಿಫಲರಾಗಿದ್ದಾರೆ.
ನನ್ನೊಳಗಿನ ಬೆಂಕಿ ಇನ್ನೂ ಜೀವಂತ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಳಿಕ ನನಗೆ ಅವಕಾಶ ಸಿಗದೇ ಹೋದಾಗ ಆಶ್ಚರ್ಯವಾಗಿತ್ತು. ನಾನು ಅದಕ್ಕಾಗಿ ತುಂಬಾ ಬೇಸರ ಮಾಡಿಕೊಂಡೆ. ನಾನು ಮುಂದಿನ ಸರಣಿಗಾಗಿ ಆಯ್ಕೆಯಾಗುತ್ತೇನೆ ಎಂದು ಭಾವಿಸಿದ್ದೆ. ನಾನು ನನ್ನ ಕೈಯಲ್ಲಿರುವುದನ್ನು ಮಾತ್ರ ಮಾಡಬಹುದು. ನನ್ನ ಮರಳುವ ವಿಶ್ವಾಸ ಇನ್ನೂ ಜೀವಂತವಾಗಿದೆ,” ಎಂದು ಅವರು ಹೇಳಿದರು.
“ನನ್ನೊಳಗಿನ ಕ್ರಿಕೆಟ್ ಉತ್ಸಾಹ ಮತ್ತು ಸಾಮರ್ಥ್ಯ ಇನ್ನೂ ಜೀವಂತವಾಗಿದೆ. ನಾನು ಸದ್ಯ ರಣಜಿ ಟ್ರೋಫಿ ಆಡುತ್ತಿದ್ದೇನೆ, ಮುಂಬೈ ತಂಡಕ್ಕಾಗಿ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇನೆ. ನನ್ನ ಗುರಿ ಸ್ಪಷ್ಟವಾಗಿದೆ. ಮತ್ತೆ ಭಾರತ ತಂಡಕ್ಕೆ ಮರಳುವೆ,” ಎಂದು ಅವರು ಹೇಳಿದ್ದಾರೆ.
ಅಜಿಂಕ್ಯ ರಹಾನೆ ಅವರ ಟೆಸ್ಟ್ ದಾಖಲೆ*
ಅಜಿಂಕ್ಯ ರಹಾನೆ 85 ಟೆಸ್ಟ್ ಪಂದ್ಯಗಳಲ್ಲಿ 5077 ರನ್ ಗಳಿಸಿದ್ದು, ಅವರ ಸರಾಸರಿ 38.46. ಇದರಲ್ಲಿ 12 ಶತಕಗಳು ಮತ್ತು 26 ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ ನಂತರದ ನಾಯಕನಾಗಿ ಪರಿಗಣಿಸಲಾದ ರಹಾನೆ, ಫಾರ್ಮ್ ಕಳೆದುಕೊಂಡ ನಂತರ ತಂಡದಿಂದ ಹೊರಗುಳಿಯುವಂತಾಯಿತು.
ಅವರ ನಾಯಕತ್ವದಲ್ಲಿ, ಭಾರತ 2020-21ರ ಬಾರ್ಡರ್-ಗಾವಾಸ್ಕರ್ ಟ್ರೋಫಿ ಗೆದ್ದಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ, ಉಳಿದ ಮೂರು ಪಂದ್ಯಗಳಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದು, ಇತಿಹಾಸ ನಿರ್ಮಿಸಿತ್ತು.