ಮೈಕ್ರೋ ಫೈನಾನ್ಸ್ ಸೇರಿದಂತೆ ಖಾಸಗಿ ಲೇವಾದೇವಿಗಾರರ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಸುಗ್ರೀವಾಜ್ಞೆ ಹೊರಡಿಸಿದೆ. ಆದರೂ ಹಲವೆಡೆ ಚಕ್ರ ಬಡ್ಡಿ ದಂಧೆಕೋರರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಈಗ ಸಿಎಂ ತವರು ಜಿಲ್ಲೆಯಲ್ಲೇ ಮೀಟರ್ ಬಡ್ಡಿ ಕಿರುಕಳವೊಂದು ಬೆಳಕಿಗೆ ಬಂದಿದೆ.
ಹುಣಸೂರಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ವರ್ಷದ ಹಿಂದೆ ಗ್ರಾಮದ ಪ್ರಸನ್ನ ಎಂಬುವವರು ಕುಮಾರ್ ಭೋವಿ ಎಂಬಾತನಿಂದ 2 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಬಡ್ಡಿಗೆ ಬಡ್ಡಿ ಹಾಗೂ ಚಕ್ರ ಬಡ್ಡಿ ಸೇರಿದ ಕುಮಾರ್, ಒಂದ ವರ್ಷ 2 ತಿಂಗಳಿಗೆ ಬರೋಬ್ಬರಿ 7.30 ಲಕ್ಷ ರೂ. ಹಣ ನೀಡಬೇಕೆಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಲ್ಲದೇ, ಮನೆಯ ಮುಂದೆ ತನ್ನ ಮಕ್ಕಳು ಹಾಗೂ ಸಹಚರರನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಪ್ರಸನ್ನ ಅವರು ತಮ್ಮ ಒಂದು ಎಕರೆ ಜಮೀನು ಮಾರಿ ಸೋಮವಾರ ಮಧ್ಯಾಹ್ನ 12.30ಕ್ಕೆ 5.30 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಆದರೆ, ಸಂಜೆ 5.30ಕ್ಕೆ ಪ್ರಸನ್ನ ಹಾಗೂ ಆತನ ತಾಯಿ ಜಮುನಾ ಬೈಕ್ ಮೇಲೆ ಹೋಗುತ್ತಿದ್ದಾಗ ಅಡ್ಡಗಟ್ಟಿ ಇನ್ನುಳಿದ ಹಣ ನೀಡುವಂತೆ ಥಳಿಸಿದ್ದಾರೆ ಎನ್ನಲಾಗಿದೆ. ಇದನ್ನು ಕಂಡು ಬಿಡಿಸಲು ಬಂದ ಪ್ರಸನ್ನ ಅವರ ಚಿಕ್ಕಪ್ಪನ ಮಗ ಅನಿಲ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಪ್ರಸನ್ನ, ತಾಯಿ ಜಮುನಾ ಹಾಗೂ ಅನಿಲ್ ಗಾಯಗೊಂಡಿದ್ದಾರೆ. ಬಡ್ಡಿ ಕೊಟ್ಟಿದ್ದ ಕುಮಾರ್ ಭೋವಿ, ಸಹಚರರು ಹಾಗೂ ಆತನ ಮಕ್ಕಳಾದ ರಂಜನ್, ಸಿದ್ದೇಶ್, ಚಂದ್ರು ಹಾಗೂ ಮಣಿಕಂಠ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟು ಐವರು ಸೇರಿಕೊಂಡು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಲ್ಲೆಗೊಳಗಾಗಿರುವ ಪ್ರಸನ್ನ ಮಾತನಾಡಿ, ನಾವು ಒಂದು ವರ್ಷ ಹಾಗೂ 2 ತಿಂಗಳ ಹಿಂದೆ ಕುಮಾರ್ ಭೋವಿ ಎಂಬುವವರೊಂದಿಗೆ ಪಡೆದಿರುವ 2 ಲಕ್ಷ ರೂ. ಗೆ ಬಡ್ಡಿ ಹಾಗೂ ಅಸಲು ಸೇರಿಸಿ ಬರೋಬ್ಬರಿ 7.20 ಲಕ್ಷ ರೂ. ಕೊಡುವಂತೆ ಕುಮಾರ್ ಭೋವಿ ಕಿರುಕುಳ ನೀಡಿದ್ದರು. ಅವರ ಕಿರುಕುಳ ತಾಳಲಾರದೆ ನಾನು ಭೂಮಿ ಮಾರಿ 5.30 ಲಕ್ಷ ರೂ. ಹಣ ಕೊಟ್ಟು, ನಮ್ಮ ಕೈಯಿಂದಲೇ ಇಷ್ಟೇ ಹಣ ಕೊಡಲು ಆಗುವುದು ಎಂದು ಹೇಳಿದ್ದೆ. ಆದರೆ, ಅವರು ಇನ್ನೂ ಬಾಕಿ ಹಣ ಬೇಕೆಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.