ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (Muda Case) ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ವರದಿ ಕೂಡ ತಯಾರಿಸಿದೆ. ಇನ್ನು, 2-3 ದಿನದಲ್ಲಿ ನ್ಯಾಯಾಲಯಕ್ಕೆ ಲೋಕಾಯುಕ್ತ ವರದಿ ಸಲ್ಲಿಕೆಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದೆಯಲ್ಲಿ ಢವ ಢವ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಲೋಕಾಯುಕ್ತ ಅಧಿಕಾರಿಗಳು ಹಗರಣ ಸಂಬಂಧ ನೂರಾರು ಅಧಿಕಾರಿಗಳಿಂದ ಮಾಹಿತಿ, ಸಿಎಂ ಹಾಗೂ ಅವರ ಪತ್ನಿ ವಿಚಾರಣೆ ಜತೆಗೆ ಹಲವು ದಾಖಲೆಗಳ ಪರಿಶೀಲಿಸಿ, 550 ಪುಟಗಳ ವರದಿ ತಯಾರಿಸಿದೆ. ಈ ತನಿಖಾ ವರದಿಯನ್ನು ಸೋಮವಾರವೇ (ಫೆ.17) ಲೋಕಾಯುಕ್ತ ಅಧಿಕಾರಿಗಳು ಸಿಟಿ ಸಿವಿಲ್ ಕೋರ್ಟ್ ನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ನ್ಯಾಯಪೀಠದ ಎದುರು ಸೋಮವಾರ ಆರಂಭವಾದ ವಿಚಾರಣೆಯಲ್ಲಿ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ಹಾಗೆಯೇ, ಅಂತಿಮ ವರದಿ ಸಲ್ಲಿಸಲು ಎರಡರಿಂದ ಮೂರು ದಿನಗಳ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ವಿಚಾರಣೆ ಫೆಬ್ರವರಿ 24ಕ್ಕೆ ಕೋರ್ಟ್ ಮುಂದೂಡಲಾಗಿದೆ. ಹಾಗಾಗಿ, 2-3 ದಿನದಲ್ಲಿ ಲೋಕಾಯುಕ್ತ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ, ಪ್ರಕರಣದಲ್ಲಿ ಕ್ಲೀನ್ ಚೀಟ್ ಸಿಗುತ್ತಾ? ಸಂಕಷ್ಟ ಎದುರಾಗುತ್ತಾ ಎನ್ನುವ ಆತಂಕದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ.