ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ದಾಳಿ ಮಾಡಿರುವ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್‌ಗೆ ಕೋರ್ಟ್ ಜಾಮೀನು ನೀಡಿದೆ.
ಆರೋಪಿ ಸತೀಶ್‌ಗೆ ಮೈಸೂರು ಕೋರ್ಟ್ (Mysuru Court) ಷರತ್ತುಬದ್ಧ ಜಾಮೀನು ನೀಡಿದೆ. 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಸರೋಜಾ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಏನಿದು ಕೇಸ್?
ಫೆ. 10ರಂದು ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು. ದಾಳಿಯಲ್ಲಿ ಇನ್‌ಸ್ಪೆಕ್ಟರ್ ಸೇರಿದಂತೆ 14 ಪೊಲೀಸರಿಗೆ ಗಾಯಗಳಾಗಿದ್ದವು. 10ಕ್ಕೂ ಅಧಿಕ ಪೊಲೀಸ್ ವಾಹನಗಳು ಜಖಂ ಆಗಿದ್ದವು. ತನಿಖೆ ಆರಂಭಿಸಿದ್ದ ಪೊಲೀಸರು 1000ಕ್ಕೂ ಅಧಿಕ ಜನರ ವಿರುದ್ಧ ಎಫ್ ಐರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸತೀಶ್ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಪೋಸ್ಟ್ ಹಾಕಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಠಾಣೆಯಲ್ಲಿ ಇರಿಸಿದ್ದರು. ಆತನ ಬಂಧನದ ಸುದ್ದಿ ತಿಳಿದ ಕೂಡಲೇ ಠಾಣೆಯ ಬಳಿ ಮುಸ್ಲಿಂ ಯುವಕರು ಜಮಾಯಿಸಿದ್ದರು. ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ, ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಯುವಕರ ಕೂಗಾಟ ಆರಂಭಿಸಿದ್ದರು. ಸುಮಾರು ಸಾವಿರಕ್ಕೂ ಅಧಿಕ ಮುಸ್ಲಿಂ ಯುವಕರು ಅಲ್ಲಿ ಆಗಮಿಸಿ, ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಠಾಣೆಯ ಗಾಜು, ಕಿಟಕಿ ಪುಡಿ ಪುಡಿ ಆಗಿದ್ದವು. ಬಂದೋಬಸ್ತ್ ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದರು. ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದರು. ಈ ವೇಳೆ ಪೊಲೀಸರು ಕೂಡ ಗಾಯಗೊಂಡಿದ್ದರು. ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಕಲ್ಲು ತೂರಾಟ ನಡೆಸಿದ ಆರೋಪಿಗಳ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.