ಬೆಂಗಳೂರು: ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಮೇ ತಿಂಗಳ ಬಳಿಕ ತಾಪಂ ಹಾಗೂ ಜಿಪಂ ಚುನಾವಣೆ ನಡೆಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ಗೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಮೂರು ವರ್ಷಗಳಾದರೂ ತಾಪಂ ಹಾಗೂ ಜಿಪಂ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣೆ ಆಯೋಗವು ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಸೋಮವಾರ ನ್ಯಾಯಾಲಯವು ಅರ್ಜಿ ವಿಚಾರಣೆ ಮಾಡುವ ವೇಳೆ ಶಶಿಕಿರಣ್ ಶೆಟ್ಟಿ ಅವರು ಮೇ ತಿಂಗಳ ಬಳಿಕ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣೆ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ಅವರು ವಾದ ಮಂಡಿಸಿದರು. ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದರೆ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು. ಆಗ ಶಶಿಕಿರಣ್ ಶೆಟ್ಟಿ ಅವರು, ಮೇ ತಿಂಗಳೊಳಗೆ ಚುನಾವಣೆ ಆಯೋಗಕ್ಕೆ ಮೀಸಲಾತಿ ಪಟ್ಟಿ ನೀಡಲಾಗುತ್ತದೆ. ಆಯೋಗವು ಜೂನ್ ಅಥವಾ ಜುಲೈನಲ್ಲಿ ಚುನಾವಣೆ ನಡೆಸಬಹುದು ಎಂದು ಹೇಳಿದರು.