ದುಬೈ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದುಬೈನ ಓವರ್ ಸೀಸ್ ಎಂಟರ್ ಟೈನ್ ಮೆಂಟ್ ಮತ್ತು ಜಿಕೆಡಿ ಇನ್ವೆಸ್ಟ್ ಮೆಂಟ್ ಎಲ್ ಎಲ್ ಸಿ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಗತ್ತಿನಾದ್ಯಂತ ಇರುವ ಕನ್ನಡಿಗರನ್ನು ಗುರುತಿಸಿ ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಪ್ರಶಸ್ತಿಗೆ ನಾಗಲಕ್ಷ್ಮೀ ಅವರು ಕೂಡ ಪಾತ್ರರಾಗಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರ ಕಾರ್ಯಗಳನ್ನು ಮೆಚ್ಚಿಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಬಡವರ, ನೊಂದವರ, ಅಸಹಾಯಕ ಮಹಿಳೆಯರ ಧ್ವನಿಯಾಗಿ ನಾಡಿನಾದ್ಯಂತ ಮಾಡಿದ ಜನ ಮೆಚ್ಚುಗೆಯ ಕೆಲಸಗಳನ್ನು ಚೌಧರಿ ಮಾಡಿದ್ದರು. ಹೀಗಾಗಿ ಈ ಕಾರ್ಯಗಳನ್ನು ಗುರುತಿಸಿ ಈ ವರ್ಷದ ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಫೆ. 16ರಂದು ದುಬೈನ ಮಿಲೇನಿಯಂ ಪ್ಲಾಜಾ ಹೋಟೆಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಾಗಲಕ್ಷ್ಮೀ ಅವರು ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ ಪಡೆದರು.
ಮಹಿಳಾ ಆಯೋಗದ ಅಧ್ಯಕ್ಷರಾದ ನಂತರದ ಅವಧಿಯಲ್ಲಿ 21 ಜಿಲ್ಲೆಗಳ ಸುತ್ತಾಟದೊಂದಿಗೆ ಅನೇಕ ಮಹಿಳೆಯರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿದ ಫಲವಾಗಿ ಹಾಗೂ ಒಂದಷ್ಟು ಮಹಿಳಾ ಸಬಲೀಕರಣ ಕಾರ್ಯವೈಖರಿಯ ಫಲವಾಗಿ ಹೊರದೇಶದ ಈ ಪ್ರಶಸ್ತಿ ನಾಗಲಕ್ಷ್ಮೀ ಚೌಧರಿ ಅವರನ್ನು ಅರಿಸಿ ಬಂದಿದೆ.
ಈ ವೇಳೆ ಮಾತನಾಡಿದ ಅಧ್ಯಕ್ಷರು, ಈ ಪ್ರಶಸ್ತಿಯು ಮಹಿಳಾ ಆಯೋಗದಿಂದ ಮಹಿಳಾ ಪರವಾಗಿ ಮಾಡಿರುವ ಕೆಲಸಕ್ಕೆ ಸಿಕ್ಕ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಆಯೋಗವು ನಾಡಿನ ಮಹಿಳೆಯರ ಧ್ವನಿಯಾಗಿ ನಿಂತು ಅವರ ಸಬಲೀಕರಣ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತದೆ. ನೊಂದ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.