ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೊಂದು ಬಹುಕೋಟಿ ಯಂತ್ರ ಖರೀದಿಗೆ ಸಿದ್ಧತೆ ನಡೆದಿದೆ. ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಕಸ ಗುಡಿಸುವ ಯಂತ್ರ ಖರೀದಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿಗೆ ಪಾಲಿಕೆ ಚಿಂತನೆ ನಡೆಸುತ್ತಿದೆ. ಸುಮಾರು 20 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 750 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಿ ಯಂತ್ರ ಖರೀದಿಗೆ ಬಿಬಿಎಂಪಿ ಮುಂದಾಗಿದೆ.
ಯಂತ್ರ ಖರೀದಿಗೆ ಕೋಟಿ ಗೂ ಅಧಿಕ ರೂ. ದರ ಇದೆ. ಆದರೆ, ಅದರ ನಿರ್ವಹಣೆಗೆ ಸುಮಾರು 600 ಕೋಟಿ ರೂ. ಖರ್ಚಾಗಲಿದೆಯಂತೆ. ನಿರ್ವಹಣೆ ಎಂದು ಸುಮಾರು 600 ಕೋಟಿ ರೂ. ಹಣ ಲೂಟಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಯಂತ್ರ ಖರೀದಿಗೆ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಒಂದು ಯಂತ್ರಕ್ಕೆ 1.6 ಕೋಟಿ ರೂ. ವೆಚ್ಚವಾಗಲಿದೆ. ಆದರೆ, ಈ ಹಿಂದೆ ಇಂತಹ 25 ಯಂತ್ರಗಳನ್ನು ಖರೀದಿ ಮಾಡಲಾಗಿತ್ತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತೋರಿಸಿ ವರ್ಷಕ್ಕೆ ಹತ್ತಾರು ಕೋಟಿ ರೂ. ಲೂಟಿ ಮಾಡಲಾಗುತ್ತಿದೆ. ಈಗ ಮತ್ತೆ 20 ಯಂತ್ರಗಳ ಖರೀದಿಗೆ ಮುಂದಾಗಲಾಗಿದೆ. ಹೀಗಾಗಿ ಯಂತ್ರ ಖರೀದಿಯ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಲೋಕಯುಕ್ತರು ಹಾಗೂ ಬಿಬಿಎಂಪಿ ಅಯುಕ್ತರಿಗೆ ದೂರು ನೀಡಿದ್ದಾರೆ.