ನವದೆಹಲಿ: ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, ನೇರ ಮಾತಿನ ಗುಣಕ್ಕೆ ಪ್ರಸಿದ್ಧರಾಗಿದ್ದು, ಕಳೆದ ಬಾರಿಯ ಆಸ್ಟ್ರೇಲಿಯಾದ ಬಾರ್ಡರ್-ಗಾವಾಸ್ಕರ್ ಟ್ರೋಫಿ ಪ್ರವಾಸದ ವೇಳೆ ತಂಡದ ಡ್ರೆಸಿಂಗ್ ರೂಮ್ ಭಿನ್ನಾಭಿಪ್ರಾಯಗಳ ಕುರಿತು ಹೊರಗಡೆ ಮಾತನಾಡುವ ಆಟಗಾರರ ಬಗ್ಗೆ ಅವರು ಕೋಪಗೊಂಡಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಡ್ರೆಸ್ಸಿಂಗ್ ರೂಂ ಮಾಹಿತಿಯ ಸೋರಿಕೆಯನ್ನು ತಪ್ಪಿಸಲು ಮುಂದಾಗಿರುವ ಕೋಚ್ ಗಂಭೀರ್, ರೋಹಿತ್ ಶರ್ಮಾ ಮತ್ತು ಉಳಿದ ತಂಡದ ಸದಸ್ಯರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಆಡದಿದ್ದರೂ ಪರ್ವಾಗಿಲ್ಲ, ಗಾಸಿಪ್ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶಿಸ್ತು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ 10 ನೀತಿಗಳನ್ನು ಪರಿಚಯಿಸಿದೆ. ಈ ನೀತಿಯನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಿಂದ ಜಾರಿಗೆ ತರುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಸ್ಟ್ರೇಲಿಯಾದಲ್ಲಿ ಆಗಿರುವ ತಪ್ಪುಗಳು ಇಲ್ಲಿ ನಡೆಯದಂತೆ ನೋಡಿಕೊಳ್ಳಲಾಗುತ್ತದೆ.
ತಂಡದ ಆಟಗಾರರಿಗೆ ಎಚ್ಚರಿಕೆ
ರೇವ್ ಸ್ಪೋರ್ಟ್ಸ್ ವರದಿ ಪ್ರಕಾರ, ತಂಡವು ದುಬೈಗೆ ತೆರಳುವ ಮುನ್ನ ಮುಂಬೈನಲ್ಲಿ ಹೋಟೆಲ್‌ನಲ್ಲಿ ಸೇರಿಕೊಂಡಿದೆ. ಅಲ್ಲಿ, ಗೌತಮ್ ಗಂಭೀರ್ ಆಟಗಾರರಿಗೆ ಡ್ರೆಸ್ಸಿಂಗ್ ರೂಂ ಚರ್ಚೆಗಳು ಸಂಪೂರ್ಣ ಗೌಪ್ಯವಾಗಿರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮಾಹಿತಿಯ ಸೋರಿಕೆ ಸಂಭವಿಸಿದ ಹಿನ್ನೆಲೆಯಲ್ಲಿ ಕಠಿಣ ಸೂಚನೆ ನೀಡಲಾಗಿದೆ.
“ದುಬೈಗೆ ಹೋಗುವ ಮೊದಲು, ಆಟಗಾರರು ಮುಂಬೈನಲ್ಲಿರುವ ಹೋಟೆಲ್‌ನಲ್ಲಿ ಸೇರಿಕೊಂಡಿದೆ. ಡ್ರೆಸ್ಸಿಂಗ್ ರೂಮಿನ ಚಿಕ್ಕ ಮಾತುಕತೆಯೂ ಹೊರಗಡೆ ಹೋಗಬಾರದು ಎಂದು ಗಂಭೀರ್ ಹೇಳಿದ್ದಾರೆ.
ದುಬೈಗೆ ಬಂದ ನಂತರ, ಭಾರತ ತಂಡವು ಸ್ಥಳೀಯ ಸಮಯದ ಪ್ರಕಾರ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ನೇರವಾಗಿ ತರಬೇತಿ ಆರಂಭಿಸಲು ತೀರ್ಮಾನಿಸಿದೆ ಎಂದು ವರದಿ ಹೇಳಿದೆ. .
ದುಬೈನಲ್ಲಿ ತಂಡ ಬೀಡು
ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಗಾಗಿ ಶನಿವಾರ ದುಬೈಗೆ ತಲುಪಿದೆ. ಈ ಬಾರಿ ತಂಡವು ಆತಿಥೇಯ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಪ್ರಯಾಣಿಸುವ ಬದಲು ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಡಲಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು X (ಹಳೆಯ ಟ್ವಿಟ್ಟರ್) ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಇತರ ಆಟಗಾರರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಐಸಿಸಿ ಟೂರ್ನಿಯಲ್ಲಿ ಭಾರತ ತಂಡ ಜಸ್ಪ್ರಿತ್ ಬೂಮ್ರಾ ಇಲ್ಲದೆ ಆಡಬೇಕಾಗುತ್ತದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿದೆ. ಈ ಟೂರ್ನಿ 2017ರಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆಯ ಬಾರಿ ನಡೆದಿತ್ತು, ಅಲ್ಲಿ ಪಾಕಿಸ್ತಾನ ಗೆದ್ದುಕೊಂಡಿತ್ತು. ಈ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು 19 ದಿನಗಳಲ್ಲಿ ನಡೆಯಲಿವೆ.
ಭಾರತ ತಂಡವು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆ ಗ್ರೂಪ್ Aಯಲ್ಲಿ ಸೇರಿದೆ. ಮೆನ್ ಇನ್ ಬ್ಲೂ ತಮ್ಮ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯುವ ಮೂಲಕ ಆರಂಭಿಸಲಿದೆ. ಫೆಬ್ರವರಿ 23ರಂದು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
ಭಾರತ ತಂಡವು ಎಲ್ಲಾ ಗುಂಪು ಹಂತದ ಮತ್ತು ನಾಕೌಟ್ ಹಂತದ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. ಪ್ರತಿ ಗುಂಪಿನಿಂದ ಉನ್ನತ ಎರಡು ತಂಡಗಳು ನಾಕೌಟ್ ಹಂತಕ್ಕೆ ಅರ್ಹವಾಗಲಿವೆ. ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು 5ರಂದು ನಡೆಯಲಿದ್ದು, ಫೈನಲ್ ಮಾರ್ಚ್ 9, 2025 ರಂದು ನಡೆಯಲಿದೆ.