ಹುಬ್ಬಳ್ಳಿ: ಮಕ್ಕಳಿಗೆ ಸೇರಬೇಕಾಗಿದ್ದ ಪೌಷ್ಟಿಕ ಆಹಾರವನ್ನು ಸಂಗ್ರಹಿಸಿಟ್ಟು ಕಾಂಗ್ರೆಸ್ ನಾಯಕಿ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಕಾಂಗ್ರೆಸ್ ನಾಯಕಿ ಬೈತೂಲ್ಲಾ ಕಿಲ್ಲೇದಾರ ಈಗ ಸಿಕ್ಕಿ ಬಿದ್ದಿರುವ ನಾಯಕಿ. ಸಣ್ಣ ಮಕ್ಕಳಿಗೆ ನೀಡುವ ಹಾಲಿನ ಪೌಡರ್, ಗೋಧಿ, ಬೇಳೆ, ಬೆಲ್ಲ ಸೇರಿದಂತೆ ಪೌಷ್ಟಿಕ ಆಹಾರಕ್ಕೆ ಕನ್ನ ಹಾಕಿ ಈಗ ಸಿಕ್ಕಿ ಬಿದ್ದಿದ್ದಾರೆ. ಪತಿ ಫಾರೂಕ್ ಜೊತೆ ಸೇರಿಕೊಂಡು ಗೋಡೌನ್ಲ್ಲಿ ಅಕ್ರಮವಾಗಿ ಮಕ್ಕಳಿಗೆ ಸೇರಬೇಕಾಗಿದ್ದ ಫುಡ್ ಪಾಕೆಟ್ ಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಪ್ಲಾಸ್ಟಿಕ್ ಸಂಗ್ರಹ ಮಾಡುವ ಹಳೇ ಗೋಡೌನ್ ನಲ್ಲಿ ಈ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ದಾಳಿ ವೇಳೆ ಸಾಕಷ್ಟು ಪ್ರಮಾಣದ ಮೂಟೆಗಳು ಪತ್ತೆಯಾಗಿವೆ.
ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ, ತಹಸೀಲ್ದಾರ್ ನೇತೃತ್ವದಲ್ಲಿ ಗಬ್ಬೂರಿನ ಪ್ಲಾಸ್ಟಿಕ್ ಸಂಗ್ರಹ ಮಾಡುವ ಹಳೇ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ.
ಆರೋಪಿ ಕಿಲ್ಲೇದಾರ ಅಂಗನವಾಡಿ ಕಾರ್ಯಕರ್ತೆಯರ ಸಂಘ ಕಟ್ಟಿಕೊಂಡು ಹೋರಾಟದ ನೆಪ ಮಾಡುತ್ತಿದ್ದರು. ಕಾಂಗ್ರೆಸ್ ನಾಯಕಿಯಾಗಿ ಹೆಸರು ಮಾಡಿದ್ದರು. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ದೂರಿನ ಮೇಲೆ ಬೈತೂಲ್ಲಾ ಕಿಲ್ಲೇದಾರ, ಪತಿ ಫಾರೂಕ್ ಹಾಗೂ ಕಾರು ಚಾಲಕ ಮತ್ತು ಕಾರು ಮಾಲೀಕರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಬೈತೂಲ್ಲಾ ಕಿಲ್ಲೇದಾರ್ ನಾಪತ್ತೆಯಾಗಿದ್ದಾರೆ.