ವಿಜಯಪುರ: 9 ತಿಂಗಳ ಬಾಲಕಿ ನೆಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. 422 ವಸ್ತುಗಳನ್ನು ಗುರುತಿಸುವ ಮೂಲಕ ವಿಜಯಪುರದ (Vijayapura) ಬಾಲಕಿ ಈ ರೆಕಾರ್ಡ್ ಮಾಡಿದ್ದಾಳೆ ಎನ್ನಲಾಗಿದೆ.
ಐರಾ ಕತ್ತಿ ರೆಕಾರ್ಡ್ ಮಾಡಿದ ಬಾಲಕಿ. ಬರೋಬ್ಬರಿ 422 ವಸ್ತುಗಳನ್ನು ಗುರುತಿಸುವ ಮೂಲಕ ಐರಾ ಸಾಧನೆ ಮಾಡಿದ್ದಾಳೆ. ಈ ಪುಟ್ಟ ಮಗುವಿನ ಅಮೋಘ ಸಾಧನೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಅಂಬೆಗಾಲಿಟ್ಟು ನಡೆಯುವ ವಯಸ್ಸಿಗೆ ತನಗೆ ಗೊತ್ತಿಲ್ಲದಂತೆಯೇ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಕ್ಕೆ ಎಲ್ಲರೂ ಹಾರೈಸುತ್ತಿದ್ದಾರೆ.
ನಗರದ ದೀಪಕ್ ಕತ್ತಿ ಹಾಗೂ ಅನುಷಾ ಕತ್ತಿ ದಂಪತಿಯ ಮಗಳು ಐರಾ. ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಅತೀ ಹೆಚ್ಚು ವಸ್ತುಗಳನ್ನು ಗುರುತಿಸಿದ ಅತೀ ಕಿರಿಯ ವಯಸ್ಸಿನ ಮಗು ಎನ್ನುವ ಗೌರವಕ್ಕೆ ಪಾತ್ರಳಾಗಿದ್ದು, ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ಕೂಡ ಮಗುವನ್ನು ಕರೆದು ಮೆಚ್ಚಿ ಗೌರವಿಸಿದ್ದಾರೆ.
ಐರಾ ಫ್ಲ್ಯಾಶ್ ಕಾರ್ಡ್ ಬಳಸಿ ವಿಭಿನ್ನ ಪ್ರಕಾರದ 422 ವಸ್ತುಗಳನ್ನು ಗುರುತಿಸಿದ್ದಾಳೆ. ಹಣ್ಣುಗಳು 24, ಕಾಡು ಪ್ರಾಣಿಗಳು 24, ದೇಹದ ಭಾಗಗಳು 24, ತರಕಾರಿ ಸೇರಿದಂತೆ 422 ವಸ್ತುಗಳನ್ನು ಗುರುತಿಸಿದ್ದಾಳೆ. ಐರಾಳ ಸಾಧನೆಗೆ ಪೋಷಕರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.