ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್, ಈಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿಯೊಂದು ಚಂದನವನದಲ್ಲಿ ಹೊರ ಬಿದ್ದಿದೆ.
ದರ್ಶನ್ ಜೈಲು ಸೇರುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಚಿತ್ರೀಕರಣ ಶೇ. 50ರಷ್ಟಾಗಿತ್ತು. 2024 ಡಿಸೆಂಬರ್ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ದರ್ಶನ್ ಹಾಗೂ ಚಿತ್ರತಂಡಕ್ಕೆ ಇತ್ತು. ಆದರೆ, ದರ್ಶನ್ ಜೈಲು ಪಾಲಾಗಿದ್ದರಿಂದಾಗಿ ಚಿತ್ರವು ಅರ್ಧಕ್ಕೆ ನಿಂತಿತ್ತು. ಇಂದು ದರ್ಶನ್ ಹುಟ್ಟುಹಬ್ಬದಂದು ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ ಜೈಲಿಗೆ ಹೋಗುವ ಮುಂಚೆ ಒಪ್ಪಂದ ಮಾಡಿಕೊಂಡಿದ್ದ ಇನ್ನೊಂದು ಸಿನಿಮಾದ ಬಗ್ಗೆಯೂ ಅಪ್ಡೇಟ್ ಸಿಕ್ಕಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ದರ್ಶನ್, ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆದರೆ, ದರ್ಶನ್ ಹಾಗೂ ಪ್ರೇಮ್ ನಡುವೆ ‘ಪುಡಾಂಗ್’ ವಿಚಾರಕ್ಕೆ ಮನಸ್ಥಾಪ ಮೂಡಿತ್ತು, ರಕ್ಷಿತಾ ಪ್ರೇಮ್ ಸಂಧಾನದ ಕಾರಣ ಆ ಮನಸ್ತಾಪ ಸರಿ ಹೋಗಿ, ಮತ್ತೊಮ್ಮೆ ಇಬ್ಬರೂ ಒಂದಾಗಲು ಮುಂದಾಗಿದ್ದರು. ಆದರೆ, ಅಷ್ಟರಲ್ಲಿ ದರ್ಶನ್ ಜೈಲು ಪಾಲಾಗಿದ್ದರು. ಈಗ ಮತ್ತೆ ಈ ಚಿತ್ರ ನಿರ್ಮಾಣದ ಮಾತುಗಳು ಕೇಳಿ ಬರುತ್ತಿವೆ. ಪ್ರೇಮ್, ಶಿವರಾಜ್ ಕುಮಾರ್ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಇಂದು ದರ್ಶನ್ ಹುಟ್ಟು ಹಬ್ಬದಂದು ದರ್ಶನ್-ಪ್ರೇಮ್ ಸಿನಿಮಾ ಸುದ್ದಿ ಹೊರ ಬಿದ್ದಿದ್ದು, ಇದು ಆದಷ್ಟು ಬೇಗ ಸತ್ಯವಾಗಲಿ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.