ಹಾಸನ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ರೈಲು ನಿಲ್ದಾಣ ಸಮೀಪ ಇರುವ ರೈಲ್ವೆ ಇಲಾಖೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪರಿಚಿತ ಯುವಕನೊಬ್ಬ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿಸಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ದೃಶ್ಯ?
ಫೆ. 12ರಂದು ರಾತ್ರಿ ರೈಲ್ವೆ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಭದ್ರತಾ ಸಿಬ್ಬಂದಿ ಮಾತನಾಡಿಸಿ ಕಳುಹಿಸಿದ್ದರು. ಭದ್ರತಾ ಸಿಬ್ಬಂದಿ ಮಾತನಾಡಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಫೆಬ್ರವರಿ 13ರ ಮದ್ಯರಾತ್ರಿ 12.43 ರಲ್ಲಿ ಮಹಿಳೆ ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗಿರುವುದು ಕೂಡ ಸಿಸಿಟಿವಿ ದೃಶ್ಯದಿಂದ ಗೊತ್ತಾಗಿದೆ. ನಂತರ ಮೂರು ನಿಮಿಷ ಬಿಟ್ಟು ಶಂಕಿತ ಆರೋಪಿ ಕೂಡ ಅದೇ ಮಾರ್ಗದಲ್ಲಿ ಹಿಂಬಾಲಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ರೈಲ್ವೆ ನಿಲ್ದಾಣದಲ್ಲಿ ಅಳವಿಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಮರುದಿನ ಬೆಳಗ್ಗೆ ಮಹಿಳೆಯ ಶವ ನಿರ್ಮಾಣ ಹಂತದ ಕಟ್ಟದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.