ನವ ದೆಹಲಿ: ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ (Mahakumbh Mela : ಕುಂಭಮೇಳ ಇನ್ನಷ್ಟು ದಿನ ವಿಸ್ತರಣೆ? ವಿರೋಧ ಪಕ್ಷದ್ದೇ ಮನವಿ!) ಅವಧಿಯನ್ನು ವಿಸ್ತರಿಸುವಂತೆ ಸಮಾಜವಾದಿ ಪಕ್ಷದ (SP) ನಾಯಕ ಅಖಿಲೇಶ್ ಯಾದವ್ ಅವರು ಮನವಿ ಮಾಡಿದ್ದಾರೆ. ಅಪಾರ ಸಂಖ್ಯೆಯ ಭಕ್ತರು ಇನ್ನೂ ಭೇಟಿ ನೀಡಲು ಬಾಕಿ ಇರುವ ಕಾರಣ, ಈ ನಿರ್ಧಾರ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
“ಇನ್ನೂ ಹಲವಾರು ಜನರು ಮಹಾ ಕುಂಭಕ್ಕೆ ಹೋಗಲು ಬಯಸುತ್ತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ, ಸರ್ಕಾರ ಮಹಾ ಕುಂಭದ ಅವಧಿಯನ್ನು ವಿಸ್ತರಿಸಬೇಕು,” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ತೀರಾ ಕಿಕ್ಕಿರಿದ ರೈಲುಗಳು, ಗಿಜಿಗುಡುವ ರಸ್ತೆಗಳು ಮತ್ತು ಅಪಾರ ಸಂಖ್ಯೆಯ ಭಕ್ತರ ಗುಂಪುಗಳು ಮಹಾ ಕುಂಭಕ್ಕೆ ತೆರಳುತ್ತಿರುವುದು ಕಾಣಿಸಿಕೊಳ್ಳುತ್ತಿದೆ. ಈ ವಾರದ ಆರಂಭದಲ್ಲಿ ಮಹಾ ಕುಂಭಕ್ಕೆ ಹೋಗುವ ರಸ್ತೆಗಳಲ್ಲಿ ಹಲವಾರು ಕಿಲೋಮೀಟರ್‌ಗಳಷ್ಟು ಸಂಚಾರ ದಟ್ಟಣೆ ಕಂಡುಬಂದಿತ್ತು. ಭಾರೀ ಜನಜಂಗುಳಿಯಿಂದ ಪ್ರಯಾಗರಾಜ್ ಸಂಗಮ ರೈಲು ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗಿತ್ತು.
ಮಹಾ ಕುಂಭದಲ್ಲಿ ಕಳೆದ ತಿಂಗಳಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ವವರ ನಿಜವಾದ ಸಂಖ್ಯೆಯನ್ನು ಮರೆಮಾಚಲು ಯತ್ನಿಸುತ್ತಿದೆ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಭಾಗವಹಿಸಲಿರುವ ಡಿ.ಕೆ. ಶಿವಕುಮಾರ್
ಮಹಾ ಕುಂಭ, ಜಗತ್ತಿನ ಅತಿದೊಡ್ಡ ಆಧ್ಯಾತ್ಮಿಕ ಸಮಾರಂಭ, ಜನವರಿ 13ರಂದು ಪ್ರಾರಂಭವಾಗಿ ಫೆಬ್ರವರಿ 26ರಂದು ಮಹಾ ಶಿವರಾತ್ರಿ ದಿನ ಮುಕ್ತಾಯವಾಗಲಿದೆ. ರಾಜ್ಯ ಸರ್ಕಾರದ ಮಾಹಿತಿಯ ಪ್ರಕಾರ, ಶುಕ್ರವಾರ ಸಂಜೆವರೆಗೆ 50 ಕೋಟಿಗೂ ಹೆಚ್ಚು ಮಂದಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದು ರಷ್ಯಾ ಮತ್ತು ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು. ಕೇವಲ ಶುಕ್ರವಾರ ಸಂಜೆ 6 ಗಂಟೆಯ ವೇಳೆಗೆ 92 ಲಕ್ಷಕ್ಕೂ ಹೆಚ್ಚು ಮಂದಿ ಸ್ನಾನ ಮಾಡಿದ್ದು, ಮಹಾ ಕುಂಭದ ಒಟ್ಟು ಭಕ್ತರ ಸಂಖ್ಯೆ ಫೆಬ್ರವರಿ 14ರ ವರೆಗೆ 50 ಕೋಟಿಯ ಗಡಿ ದಾಟಿದೆ ಎಂದು ಸರ್ಕಾರ ಹೇಳಿದೆ.