ಬೆಂಗಳೂರು: ನಾವು ಎಷ್ಟೇ ಕಾಸ್ಟ್ಲಿ ಮೊಬೈಲ್ ಖರೀದಿಸಲಿ, ಮೂರ್ನಾಲ್ಕು ತಿಂಗಳಿಗೊಮ್ಮೆ ಅದರ ಬ್ಯಾಕ್ ಕವರ್ ಬದಲಿಸಬೇಕು ಸಣ್ಣ ಸ್ಕ್ರ್ಯಾಚ್ ಆದರೂ ಸ್ಕ್ರೀನ್ ಗಾರ್ಡ್ಅನ್ನು ಹೊಸತು ಹಾಕಿಸಬೇಕು. ಇದಕ್ಕೆ ಮೂರ್ನಾಲ್ಕು ತಿಂಗಳಿಗೆ ಕನಿಷ್ಠ ಮೂರರಿಂದ ನಾಲ್ಕು ನೂರು ರೂಪಾಯಿ ಖರ್ಚಾಗುತ್ತದೆ. ಹೀಗೆ ಪ್ರತಿ ಬಾರಿ ಬ್ಯಾಕ್ ಕವರ್, ಸ್ಕ್ರೀನ್ ಗಾರ್ಡ್, ಗೊರಿಲ್ಲಾ ಗ್ಲಾಸ್ ಎಂದು ನಮ್ಮ ದುಡ್ಡನ್ನು ಇನ್ನುಮುಂದೆ ಖರ್ಚು ಮಾಡಬೇಕಿಲ್ಲ. ಹೌದು, ನೀವು ಕೇಳಿದ್ದು ಸರಿಯಾಗಿಯೇ ಇದೆ. ಏಕೆಂದರೆ, ಇವುಗಳನ್ನು ಮೊಬೈಲ್ ಕಂಪನಿಗಳೇ ಈಗ ಪ್ರತಿ ತಿಂಗಳು ಉಚಿತವಾಗಿ ನೀಡುತ್ತಿವೆ. ಹೇಗೆ ಅಂತೀರಾ? ಮುಂದೆ ನೋಡಿ.
ಹೌದು, ಗ್ರಾಹಕರ ಅಗತ್ಯತೆಗಳು ಹಾಗೂ ಕಂಪನಿಯ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಲು ಕಂಪನಿಗಳೇ ಪ್ರತಿ ತಿಂಗಳು ನಿಗದಿತ ದಿನಾಂಕಗಳಂದು ಗ್ರಾಹಕರಿಗೆ ಉಚಿತವಾಗಿ ಬ್ಯಾಕ್ ಕವರ್, ಸ್ಕ್ರೀನ್ ಗಾರ್ಡ್ ಗಳನ್ನು ಉಚಿತವಾಗಿ ನೀಡುತ್ತಿವೆ. ಅದರಲ್ಲೂ, ವಿವೊ, ಒಪ್ಪೊ ಹಾಗೂ ರಿಯಲ್ ಮಿಯಂತಹ ಪ್ರಮುಖ ಮೊಬೈಲ್ ಕಂಪನಿಗಳಿಗೆ ಪ್ರತಿ ತಿಂಗಳು ಗ್ರಾಹಕರಿಗೆ ಉಚಿತ ಸೇವೆ ನೀಡುತ್ತಿವೆ. ಗ್ರಾಹಕರು ಆಯಾ ಮೊಬೈಲ್ ಕಂಪನಿಗಳ ಸರ್ವಿಸ್ ಸೆಂಟರ್ ಗಳಿಗೆ ತೆರಳಿ ಉಚಿತ ಸೇವೆ ಪಡೆಯಬಹುದಾಗಿದೆ.
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ವಿವೊ ಕಂಪನಿಯು ಪ್ರತಿ ತಿಂಗಳ 14 ಹಾಗೂ 16ರಂದು ಗ್ರಾಹಕರಿಗೆ ಸರ್ವಿಸ್ ಸೆಂಟರ್ ಗಳಲ್ಲಿ ಹಲವು ಸೇವೆಗಳನ್ನು ನೀಡುತ್ತದೆ. ಉಚಿತವಾಗಿ ಬ್ಯಾಕ್ ಕವರ್, ಸ್ಕ್ರೀನ್ ಗಾರ್ಡ್ ಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಉಚಿತವಾಗಿ ಹ್ಯಾಂಡ್ ಸೆಟ್ ಚೆಕ್ಕಿಂಗ್, ಫ್ರೀ ಸಾಫ್ಟ್ ವೇರ್ ಅಪ್ ಡೇಟ್ ಮಾಡಿಕೊಡುವುದರ ಜತೆಗೆ ಬಿಡಿ ಭಾಗಗಳ ಖರೀದಿಗೆ ಶೇ.10ರಷ್ಟು ಡಿಸ್ಕೌಂಟ್ ಕೂಡ ದೊರೆಯಲಿದೆ.
ರಿಯಲ್ ಮಿ ಕಂಪನಿಯು ಕೂಡ ಗ್ರಾಹಕರಿಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ಗ್ರಾಹಕರಿಗೆ ಹಲವು ಉಡುಗೊರೆ ನೀಡುತ್ತಿದೆ. ಸರ್ವಿಸ್ ಸೆಂಟರ್ ಗಳಲ್ಲಿ ರಿಯಲ್ ಮಿ ಮೊಬೈಲ್ ಗಳನ್ನು ಉಚಿತವಾಗಿ ಕ್ಲೀನ್ ಮಾಡಿ ಕೊಡುತ್ತಾರೆ. ಫ್ರೀ ಆಗಿ ಸಾಫ್ಟ್ ವೇರ್ ಅಪ್ ಡೇಟ್ ಮಾಡುತ್ತಾರೆ. ಇನ್ನು, ಇದೇ ದಿನ ಬಿಡಿ ಭಾಗಗಳನ್ನು ಖರೀದಿಸಿದರೆ ಶೇ.50ರಷ್ಟು ಡಿಸ್ಕೌಂಟ್ ಕೂಡ ದೊರೆಯುತ್ತದೆ.
ಗ್ರಾಹಕರನ್ನು ಸೆಳೆಯಲು ಒಪ್ಪೊ ಕಂಪನಿಯು ಇನ್ನಷ್ಟು ಆಕರ್ಷಕ ಉಡುಗೊರೆಗಳನ್ನು ಪರಿಚಯಿಸಿದೆ. ನೀವು ಪ್ರತಿ ತಿಂಗಳ 10ನೇ ತಾರೀಖಿನಂದು ಸರ್ವಿಸ್ ಸೆಂಟರ್ ಗೆ ಹೋದರೆ, ಮೊದಲು ವೆಲ್ ಕಮ್ ಡ್ರಿಂಕ್ ನಿಂದ ಸ್ವಾಗತಿಸುತ್ತಾರೆ. ಇದಾದ ಬಳಿಕ ಉಚಿತವಾಗಿ ಮೊಬೈಲ್ ಬ್ಯಾಕ್ ಕವರ್, ಸ್ಕ್ರೀನ್ ಗಾರ್ಡ್ ಗಳನ್ನು ಕೂಡ ಪಡೆಯಬಹುದಾಗಿದೆ. ಫ್ರೀ ಆಗಿ ಸಾಪ್ಟ್ ವೇರ್ ಅಪ್ಡೇಟ್ ಜತೆಗೆ ಬಿಡಿಭಾಗಗಳಿಗೆ ಆಫರ್ ಕೂಡ ದೊರೆಯುತ್ತದೆ.
ಹೆಚ್ಚಿನ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಮೂರೂ ಕಂಪನಿಗಳು ಪ್ರತಿ ತಿಂಗಳು ಗ್ರಾಹಕರಿಗೆ ಹಲವು ಸೇವೆ ನೀಡುತ್ತಿವೆ. ಗ್ರಾಹಕರು ಹಣ ವ್ಯಯಿಸುವ ಬದಲು ಹತ್ತಿರದ ಮೊಬೈಲ್ ಸರ್ವಿಸ್ ಸೆಂಟರ್ ಗಳಿಗೆ ಭೇಟಿ ನೀಡಿ, ಇವುಗಳನ್ನು ಪಡೆಯಬಹುದಾಗಿದೆ. ಆ ಮೂಲಕ ಹಣ ಉಳಿಸಬಹುದಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಆಯಾ ಕಂಪನಿಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬಹುದಾಗಿದೆ.