ಬೆಂಗಳೂರು: ರಾತ್ರಿ ಮಲಗುವಾಗ ಚಾರ್ಜ್ಗೆ ಇಟ್ಟಿದ್ದ ಮೊಬೈಲ್ ಫೋನ್ಗಳು ಸ್ಫೋಟಗೊಳ್ಳುವ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಹೀಗಾಗಿ ಚಾರ್ಜ್ಗೆ ಇಟ್ಟಾಗ ಮಾತ್ರ ಬಳಸಬೇಡಿ ಎಂದೆಲ್ಲ ಸಲಹೆಗಳನ್ನು ನೀಡಲಾಗುತ್ತದೆ. ಆದರೆ, ಜೇಬಿನಲ್ಲಿ ಇಟ್ಟಾಗ ಇಂಥ ಘಟನೆಗಳು ಆಗಿರುವುದು ಕಡಿಮೆ.
ಆದರೆ, ಇತ್ತೀಚಿಗೆ ಇಂಥದ್ದೊಂದು ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳ ಪ್ಯಾಂಟ್ ಜೇಬಿನಲ್ಲಿಟ್ಟಿದ್ದ ಸ್ಮಾರ್ಟ್ಫೋನ್ ಸಿಡಿದು ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. ‘ಹಾಟ್’ ಆಗಿದ್ದ ಯುವತಿಯ ಜೇಬಿನಲ್ಲಿ ಆ ಫೋನ್ ಬಿಸಿ ತಡೆದುಕೊಳ್ಳಲಾಗದೇ ಸಿಡಿದಿರುವ ಸುದ್ದಿ ಹಾಗೂ ವಿಡಿಯೊ ವೈರಲ್ ಆಗಿದೆ. ಆದರೆ, ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ.
ಬ್ರೆಜಿಲ್‌ನ ಅನಾಪೊಲಿಸ್ ಪ್ರದೇಶದಲ್ಲಿರುವ ಸೂಪರ್‌ಮಾರ್ಕೆಟ್‌ನಲ್ಲಿ ಯುವಿತಿಯ ಫೋನ್ ಸ್ಫೋಟಗೊಂಡಿದ್ದು ಆಕೆಯ ಹಿಂಭಾಗದ ಜೇಬಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟಗೊಂಡ ಫೋನ್‌ನಿಂದ ಹೊಗೆ ಬರುತ್ತಿದ್ದಂತೆ, ಅವರ ಪಕ್ಕದಲ್ಲೇ ನಿಂತಿದ್ದ ಆಕೆಯ ಬಾಯ್ಫ್ರೆಂಡ್ ಗಾಬರಿ ಬಿದ್ದಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಸಿಸಿಟಿವಿ ವೀಡಿಯೊದಲ್ಲಿ ಈ ದೃಶ್ಯ ದಾಖಲಾಗಿದೆ. ಇದು ಶಾಪಿಂಗ್ ಮಾಲ್ನಲ್ಲಿ ನಡೆದ ಘಟನೆ. ಅವರು ಡೆಕ್ಕಿನಿಂದ ವಸ್ತುಗಳನ್ನು ಆಯ್ಕೆ ಮಾಡುತ್ತಿದ್ದಂತೆ ಜೀನ್ಸ್ ಪ್ಯಾಂಟ್ನ ಹಿಂಭಾಗದ ಜೇಬಿನಿಂದ ಹೊಗೆ ಬರುತ್ತಿರುವುದು ಕಂಡು ಬಂದಿದೆ.
ಮಹಿಳೆಗೆ ಹಿಂಭಾಗಕ್ಕೆ ಗಂಭೀರ ಗಾಯ
ಫೋನ್ ಸ್ಫೋಟಗೊಂಡ ಬಳಿಕ, ಮಹಿಳೆ ತೀವ್ರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ವರದಿಗಳ ಪ್ರಕಾರ, Motorola Moto E32 ಎಂಬ ಫೋನ್ ಅವರು ಬಳಸುತ್ತಿದ್ದರು, ಅದು ಅವರ ಹಿಂಭಾಗದ ಜೇಬಿನಲ್ಲಿ ಇದ್ದಾಗಲೇ ಸ್ಫೋಟಗೊಂಡು ಜೀನ್ಸ್‌ಗೆ ಬೆಂಕಿ ಹೊತ್ತಿಕೊಂಡಿತು. ಯುವತಿಯ ಹಿಂಭಾಗದಲ್ಲಿ ಬೆಂಕಿ ಕಾಣುತ್ತಿದ್ದಂತೆ, ಬಾಯ್ಫ್ರೆಂಡ್ ಅದನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸೂಪರ್‌ಮಾರ್ಕೆಟ್‌ನ ಗ್ರಾಹಕರು ಮತ್ತು ಸಿಬ್ಬಂದಿಗಳು ಈ ಘಟನೆಯನ್ನು ನೋಡುವಷ್ಟರಲ್ಲಿ ಘಟನೆ ನಡೆದು ಹೋಗಿದೆ. ಮಹಿಳೆ ತೀವ್ರವಾಗಿ ನೋವಿನಿಂದ ಕೂಗುತ್ತಿದ್ದಂತೆಯೇ, ಅವರು ಅವರ ಹಿಂಭಾಗವನ್ನು ಹೊಡೆದು ಬೆಂಕಿಯನ್ನು ಕಡಿಮೆಯಾಗಿಸಲು ಪ್ರಯತ್ನಿಸಿರುವುದನ್ನು ವಿಡಿಯೊದಲ್ಲಿ ನೋಡಬಹುದು.
ಮಹಿಳೆ ಆಸ್ಪತ್ರೆಗೆ ದಾಖಲು
ಬೆಂಕಿಯಿಂದ ಹಿಂಭಾಗ ಸುಟ್ಟ ಬಳಿಕ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಯ ಪ್ರಕಾರ, ಅವರ ಕೈ, ಮುಷ್ಟಿ , ಹಿಂಭಾಗ ಮತ್ತು ಬೆನ್ನು ಭಾಗದಲ್ಲಿ ಎರಡನೇ ಮತ್ತು ಮೂರನೇ ಮಟ್ಟದ ಸುಟ್ಟ ಗಾಯಗಳು ಸಂಭವಿಸಿವೆ. ಆಕೆಯ ಕೂದಲಿನ ಕೆಲವು ಭಾಗಗಳು ಕೂಡ ಸುಟ್ಟಿವೆ.