ಬೆಂಗಳೂರು: ಮಹಾ ಕುಂಭ ಮೇಳಕ್ಕೆ ಭಕ್ತರು ವಿವಿಧ ರೀತಿಯಲ್ಲಿ ಪ್ರಯಾಣಿಸಿದ್ದಾರೆ. ಇದೊಂದು ಶತಮಾನದ ಅತ್ಯಮೂಲ್ಯ ಅವಕಾಶವಾಗಿರುವ ಕಾರಣ ಹಿಂದೂಗಳು ತಮ್ಮೆಲ್ಲ ನೋವು, ಕಷ್ಟಗಳನ್ನು ಮರೆತು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡುತ್ತಿದ್ದಾರೆ. ಕೆಲವರು ಕಿಕ್ಕಿರಿ ತುಂಬಿರುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಇನ್ನೂ ಅನೇಕರು ಬಸ್, ಸ್ವಂತ ಕಾರಿನ ಮೂಲಕ ಪ್ರಯಾಣ ಮಾಡಿದ್ದಾರೆ. ದುಡ್ಡಿದ್ದವರು ವಿಮಾನ ಮಾರ್ಗದ ಮೂಲಕ ಸುಲಭವಾಗಿ ತಲುಪಿದ್ದಾರೆ. ಆದರೆ, ಇಲ್ಲಿ ಕೆಲವು ಮಹಾನ್ ಭಕ್ತರು, ಆಟೊದಲ್ಲಿ ಪ್ರಯಾಣಿಸಿ ಮೇಳದ ಸಂತಸವನ್ನು ಕಣ್ತುಂಬಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕೆಲವು ಯುವಕರು ಆಟೋ ರಿಕ್ಷಾದ ಮೂಲಕ ಉತ್ತರಪ್ರದೇಶಕ್ಕೆ ಹೋಗುತ್ತಿರುವ ದೃಶ್ಯಗಳು ಇದೀಗ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಅವರ ಕೌತಕ ಹಾಗೂ ಭಕ್ತಿಯ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
ಚಿತ್ತೂರಿನಿಂದ ಪ್ರಯಾಗ್ರಾಜ್‌ಗೆ ಆಟೋ ಸವಾರಿ
ಯೂಟ್ಯೂಬರ್ ‘ಹಾಟ್‌ಸ್ಪಾಟ್ ಸಾಯಿ’ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಮಹಾ ಕುಂಭ ಆಟೋ ಯಾತ್ರೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಉತ್ತರಪ್ರದೇಶದತ್ತ ಆಟೋ ರಿಕ್ಷಾದಲ್ಲಿ ಯುವಕರು ಪ್ರಯಾಣಿಸುತ್ತಿರುವ ಕೆಲವು ವಿಡಿಯೋಗಳನ್ನು ಅವರು ಪಬ್ಲಿಷ್ ಮಾಡಿದ್ದಾರೆ.
ಈ ಯುವಕರು 4000 ಕಿಮೀ ದೂರ ಆಟೋದಲ್ಲಿ ಸವಾರಿ ಮಾಡಿದ್ದಾರೆ. ಪ್ರಯಾಣವನ್ನು ಪ್ರಾರಂಭಿಸುವ ಮುನ್ನ, ಅವರು ಚಿತ್ತೂರಿನ ಪ್ರಸಿದ್ಧ ಕನಿಪಕಂ ಗಣಪತಿ ದೇವಸ್ಥಾನಕ್ಕೆ ಭೇಟಿ ಪ್ರಾರ್ಥಿಸಿದ್ದಾರೆ. ಅಲ್ಲಿಯೇ ದೇವರ ಆಶೀರ್ವಾದ ಪಡೆದು ತಮ್ಮ ಆಟೋಯಾತ್ರೆಯನ್ನು ಪ್ರಾರಂಭಿಸಿದ್ದಾರೆ.
ಸಿಎನ್ಜಿ ಆಟೋದಲ್ಲಿ 4000 ಕಿಮೀ ಪ್ರಯಾಣ
ವೀಡಿಯೊಗಳಲ್ಲಿ ಒಬ್ಬರು ಆಟೋವನ್ನು ಓಡಿಸುತ್ತಿದ್ದು, ಉಳಿದವರು ಹಿಂಭಾಗದ ಸೀಟ್ನಲ್ಲಿ ಕುಳಿತಿರುವುದನ್ನುಕಾಣಬಹುದು. ಅವರು ಆಟೋ ಹಿಂಭಾಗದ ಪ್ರಯಾಣಿಕರ ಸೀಟ್ಗಳನ್ನು ಸ್ಲೀಪರ್ ಕೋಚ್ ಪರಿವರ್ತಿಸಿಕೊಂಡಿದ್ದಾರೆ. ಶಿಫ್ಟ್‌ನಲ್ಲಿ ಅವರು ಆಟೋ ಚಲಾಯಿಸಿದ್ದಾರೆ.
ಗಮನಾರ್ಹವಾಗಿ, ಈ ಆಟೋ CNG ಇಂಧನದ ಮೂಲಕ ಓಡುತ್ತಿದೆ. ಒಂದು ವಿಡಿಯೋದಲ್ಲಿ, ಯೂಟ್ಯೂಬರ್ ತನ್ನ ಪ್ರಯಾಣದ ಬಗ್ಗೆ ವಿವರ ನೀಡುತ್ತಾ, “ನಾವು ಚಿತ್ತೂರಿನಿಂದ ಪ್ರಯಾಗ್ರಾಜ್ ಮತ್ತು ವಾರಾಣಸಿಗೆ ಆಟೋದಲ್ಲಿ ಪ್ರಯಾಣಿಸಿದ್ದೇವೆ. ಹೋಗುವುದು ಬರುವುದ ಸೇರಿದಂತೆ ಈ ಪ್ರಯಾಣದ ಒಟ್ಟು ದೂರ 4000 ಕಿ.ಮೀ . ನಾವು ಆಟೋದಲ್ಲೇ ಆಹಾರ ವಸ್ತುಗಳನ್ನು ತೆಗೆದುಕೊಂಡಿದ್ದೇವೆ.” ಎಂದು ಹೇಳಿದ್ದಾರೆ.