ಬೆಂಗಳೂರು: ಕರ್ನಾಟಕದ ನಟಿ ರಶ್ಮಿಕಾ ಮಂದಣ್ಣ ಅವರು ಬೇರೆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ, ದೇಶಾದ್ಯಂತ ಖ್ಯಾತಿ ಗಳಿಸಿದ ಬಳಿಕ ಅವರು ನೀಡುವ ಕೆಲ ಹೇಳಿಕೆಗಳು ಕನ್ನಡಿಗರ ಟೀಕೆಗೆ ಗುರಿಯಾಗುತ್ತಿವೆ. ನನಗೆ ಕನ್ನಡ ಅಷ್ಟೊಂದು ಸರಿಯಾಗಿ ಬರಲ್ಲ ಎಂಬುದು ಸೇರಿ ರಶ್ಮಿಕಾ ಮಂದಣ್ಣ ಅವರು ನೀಡಿದ ಹಲವು ಹೇಳಿಕೆಗಳು ಇದಕ್ಕೂ ಮೊದಲು ಟೀಕೆಗೆ ಗುರಿಯಾಗಿದ್ದವು. ಈಗ “ನಾನು ಹೈದರಾಬಾದ್ ನವಳು” ಎಂದು ರಶ್ಮಿಕಾ ಮಂದಣ್ಣ ಹೇಳಿರುವುದು ಮತ್ತೆ ಆಕ್ರೋಶ ವ್ಯಕ್ತವಾಗುತ್ತಿದೆ.
ಛಾವಾ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, “ನಾನು ಹೈದರಾಬಾದ್ ನವಳು. ನಾನು ಇಲ್ಲಿಯವಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನೂ ನಿಮ್ಮ ಫ್ಯಾಮಿಲಿಯ ಭಾಗವಾಗಿದ್ದೇನೆ” ಎಂದು ಹೈದರಾಬಾದ್ ನಲ್ಲಿ ಹೇಳಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಕೊಡಗಿನವರಾದ ರಶ್ಮಿಕಾ ಮಂದಣ್ಣ, ಕನ್ನಡ ಸಿನಿಮಾ ಮೂಲಕ ಸಿನಿಜಗತ್ತಿಗೆ ಪರಿಚಯವಾದವರು. ಈಗ ತೆಲುಗು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ಕನ್ನಡತಿಯೊಬ್ಬಳ ಯಶಸ್ಸನ್ನು ಕನ್ನಡಿಗರು ಕೊಂಡಾಡುತ್ತಿದ್ದಾರೆ. ಇದರ ಮಧ್ಯೆಯೇ, ರಶ್ಮಿಕಾ ಮಂದಣ್ಣ ಅವರು ಕನ್ನಡಿಗರನ್ನು ಕೆರಳಿಸುವ ಹೇಳಿಕೆಗಳನ್ನು ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ.