ಮಂಗಳೂರು: ದೇಶದ ಏಕೈಕ ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಕಾರ್ಯಕ್ರಮವಾದ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ತನ್ನ ಎರಡನೇ ಆವೃತ್ತಿಗೆ ಸಜ್ಜಾಗಿದೆ. 2025ರ ಮಾರ್ಚ್ 7ರಿಂದ 9ರವರೆಗೆ ಮಂಗಳೂರಿನ ಕರ್ನಾಟಕದ ಸಸಿಹಿತ್ಲು ಕಡಲತೀರದಲ್ಲಿ ಎರಡನೇ ಆವೃತ್ತಿ ನಡೆಯಲಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿರುವ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಬಲಿತ ಈ ಪ್ಯಾಡಲ್ ಫೆಸ್ಟಿವಲ್ ನಲ್ಲಿ ವಿಶ್ವದ ಪ್ರಮುಖ ಎಸ್ಯುಪಿ ಕ್ರೀಡಾಪಟುಗಳು, ಪ್ರಾದೇಶಿಕ ಸ್ಪರ್ಧಿಗಳು ಮತ್ತು ಜಲಕ್ರೀಡೆ ಪ್ರೇಮಿಗಳು ಭಾಗವಹಿಸಲಿದ್ದಾರೆ.
2025ರ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ಗೆ ನೋಂದಣಿಗಳು ಈಗ ಶುರುವಾಗಿದ್ದು, ವಿವಿಧ ವಿಭಾಗಗಳಲ್ಲಿ ಭಾಗವಹಿಸುವವರನ್ನು ಸ್ವಾಗತಿಸುತ್ತಿದೆ.
2024ರಲ್ಲಿ ನಡೆದ ಪ್ರಥಮ ಆವೃತ್ತಿಯ ಯಶಸ್ಸಿನ ಬಳಿಕ ಇದು ಭಾರತದ ಮೊದಲ ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಈವೆಂಟ್ ಆಗಿ ಗುರುತಿಸಿಕೊಂಡಿದೆ. ಈ ಬಾರಿ ನಡೆಯಲಿರುವ ಫೆಸ್ಟಿವಲ್ ಮತ್ತಷ್ಟು ಉತ್ತಮವಾಗಿ ನಡೆಯಲಿದ್ದು, ಭಾರತೀಯ ಕ್ರೀಡಾಪಟುಗಳಿಗೆ ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸುವ ವೇದಿಕೆ ನೀಡುತ್ತದೆ. ಇತ್ತೀಚೆಗೆ ಭಾರತವು 2026ರ ಏಷ್ಯನ್ ಗೇಮ್ಸ್ನ ಸರ್ಫಿಂಗ್ ವಿಭಾಗದಲ್ಲಿ ತನ್ನ ಮೊದಲ ಕೋಟಾವನ್ನು ಪಡೆದುಕೊಂಡಿದೆ.

ಎಪಿಪಿ ವರ್ಲ್ಡ್ ಟೂರ್ನ ಸಿಇಒ ಟ್ರಿಸ್ಟಾನ್ ಬಾಕ್ಸ್ಫೋರ್ಡ್ ಮಾತನಾಡಿ ‘ಕಳೆದ ವರ್ಷ ನಡೆದ ಪ್ರಥಮ ಆವೃತ್ತಿಯ ಅದ್ಭುತ ಯಶಸ್ಸಿನ ಬಳಿಕ ಎರಡನೇ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಆವೃತ್ತಿಯನ್ನು ನಡೆಸಲು ನಾವು ಉತ್ಸುಕರಾಗಿದ್ದೇವೆ. ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ಗೆ ಭಾರತವು ಅಪಾರ ಸಾಮರ್ಥ್ಯವನ್ನು ನೀಡಿದೆ. ಈ ಅಂತರಾಷ್ಟ್ರೀಯ ಈವೆಂಟ್ನ ಪುನರಾಗಮನವು ಜಾಗತಿಕ ಪ್ಯಾಡಲ್ ಕ್ರೀಡೆಗಳಿಗೆ ಒತ್ತು ನೀಡುತ್ತದೆ. ಪ್ರಪಂಚದ ಉತ್ತಮ ಪ್ರತಿಭೆಗಳು ಮಂಗಳೂರಿನಲ್ಲಿ ಸ್ಪರ್ಧಿಸುವುದನ್ನು ನೋಡಲು ನಾವು ಕೂಡ ಕಾತುರದಿಂದ ಕಾಯುತ್ತಿದ್ದು, ಈ ಇವೆಂಟ್ ಮುಂದಿನ ಪ್ಯಾಡಲ್ ಇವೆಂಟ್ ಗು ಮತ್ತಷ್ಟು ಸ್ಫೂರ್ತಿ ನೀಡಲಿದೆ ಎಂದರು.
ಸರ್ಫಿಂಗ್ ಸ್ವಾಮಿ ಫೌಂಡೇಶನ್ನ ನಿರ್ದೇಶಕ ಧನಂಜಯ್ ಶೆಟ್ಟಿ ಮಾತನಾಡಿ ‘ಇಂಡಿಯಾ ಪ್ಯಾಡಲ್ ಫೆಸ್ಟಿವಲ್ನ ಮರಳುವಿಕೆ, ಭಾರತದಲ್ಲಿ ಹೆಚ್ಚುತ್ತಿರುವ SUP ಮತ್ತು ಸರ್ಫಿಂಗ್ ಸಂಸ್ಕೃತಿಗೆ ಸಾಕ್ಷಿಯಾಗಿದೆ. ಕಳೆದ ವರ್ಷದ ಈವೆಂಟ್ ನಮ್ಮ ಪ್ಯಾಡ್ಲರ್ಗಳಿಗೆ ಮಹತ್ವದ ತಿರುವು ನೀಡಿತು, ಅಂತರಾಷ್ಟ್ರೀಯ ಸ್ಪರ್ಧೆಗಳ ಅಮೂಲ್ಯ ಅನುಭವವನ್ನು ಒದಗಿಸಿತು. ಕರ್ನಾಟಕ ಪ್ರವಾಸೋದ್ಯಮದ ನಿರಂತರ ಬೆಂಬಲದೊಂದಿಗೆ, ನಾವು ಈ ಇವೆಂಟ್ ಅನ್ನು ಮುಂದುವರಿಸಲು ಮತ್ತು ಹೊಸ ಪೀಳಿಗೆಯ ಪ್ಯಾಡ್ಲರ್ಗಳನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ, ಕರ್ನಾಟಕದ ಸುಂದರ ಕಡಲತೀರವನ್ನು ಪ್ರಾಥಮಿಕ ಜಲಕ್ರೀಡೆಯ ಸ್ಥಳವಾಗಿ ಉತ್ತೇಜಿಸುವ ಉದ್ದೇಶವನ್ನೂ ಹೊಂದಿದ್ದೇವೆ ಎಂದಿದ್ದಾರೆ.
ಭಾರತದ ಪ್ರಮುಖ ಎಸ್ಯುಪಿ ಇವೆಂಟ್ ಆಗಿರುವ ಈ ಉತ್ಸವದಲ್ಲಿ ಎಲೈಟ್ ಸ್ಪರ್ಧೆಗಳು, ಸಮುದಾಯ ರೇಸ್ಗಳು ಮತ್ತು ಕಾರ್ಯಾಗಾರಗಳು ನಡೆಯಲಿದ್ದು, ವೃತ್ತಿಪರ ಅಥ್ಲೀಟ್ ಗಳಿಗೆ ವೇದಿಕೆಯನ್ನು ಒದಗಿಸಲಿದೆ. ಪ್ಯಾಡಲ್ಸರ್ಫ್ ಪ್ರೊಫೆಷನಲ್ಸ್ ಅಸೋಸಿಯೇಶನ್ (APP) ವರ್ಲ್ಡ್ ಟೂರ್ನ ಅಂತರಾಷ್ಟ್ರೀಯ SUP ತಾರೆಯರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ, 2025ರ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಭಾರತದಲ್ಲಿ ಈ ಕ್ರೀಡೆಯ ಭದ್ರ ಬುನಾದಿಯನ್ನು ನಿರ್ಮಿಸಲು ಪ್ರಮುಖ ಪಾತ್ರ ವಹಿಸಲಿದೆ.