ಬೆಂಗಳೂರು: ಶಾಸಕ ಮುನಿರತ್ನ ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ತಲೆಗೆ ಪೆಟ್ಟು ಬಿದ್ದಿದೆ ಎಂದು ವೈದ್ಯರು ಹೇಳಿದ್ದಾರಲ್ಲ. ಆಸಿಡ್ ದಾಳಿಯಾಗಿ ತಲೆಗೆ ಪೆಟ್ಟು ಬಿದ್ದಿದೆ ಅಂತಾ ಹೇಳಿದ್ದರು. ತಲೆ ಕೆಟ್ಟಿದೆ ಅಂತಾ ಹೇಳಿದ್ದರು. ಹೀಗಾಗಿ ವೈದ್ಯರ ಸಲಹೆ ಪಡೆದು ತೋರಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಸಂಚು ಹಾಗೂ ಕುತಂತ್ರ ಮಾಡುತ್ತಿದ್ದಾರೆ. ಅದನ್ನು ಎಲ್ಲರಿಗಿಂತಲೂ ಮುಂಚಿತವಾಗಿ ಬೇರೆಯವರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊದಲಿನಿಂದಲೂ ಯಾವ ಯಾವ ಸ್ಟೇಷನ್ ನಲ್ಲಿ ಕೇಸ್ ಇದೆ. ಅದು ಮತ್ತೆ ಈಗ ಮುಂದುವರೆಯಬಹುದು. ಅದೇ ಕಾರಣಕ್ಕೆ ಈ ರೀತಿ ಮಾಡುತ್ತಿರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ತೆರಿಗೆ ಕೇಳುವುದು ಸಣ್ಣತನ ಎಂದು ಹೇಳಿಕೆ ನೀಡಿದ್ದ ಪಿಯುಷ್ ಗೋಯಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ತೆರಿಗೆ ಕೇಳುವುದನ್ನು ಸಣ್ಣತನ ಅನ್ನುವುದಿಲ್ಲ. ರಾಜ್ಯಗಳ ಆರ್ಥಿಕ ಪರಸ್ಥಿತಿಯನ್ನ ಹಾಳು ಮಾಡುವ ಸಂಸ್ಕೃತಿ ಬಿಜೆಪಿಯದ್ದಾಗಿದೆ. ಇಂತಹ ಕೆಟ್ಟ ಸಂಸ್ಕೃತಿಯನ್ನು ಬಿಜೆಪಿ ದೇಶದಲ್ಲಿ ನಡೆಸಿಕೊಂಡು ಬರುತ್ತಿದೆ. ಬಿಜೆಪಿಯವರು ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದನ್ನು ಮಾಡಲು ಮುಂದೆ ಇದ್ದಾರೆ.
ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರಕಾರ ಅಡ್ಡಿಯಾಗಿದೆ. ನಮ್ಮ ರಾಜ್ಯದ ಹಣವನ್ನು ಬೇರೆ ರಾಜ್ಯಗಲ್ಲಿ ವ್ಯರ್ಥ ಮಾಡಲಾಗುತ್ತಿದೆ. ನಾವು ಕಟ್ಟಿದ ತೆರಿಗೆ ಹಣವನ್ನೇ ನಮಗೆ ಕೊಡುತ್ತಿಲ್ಲ. ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಅಲ್ಲದೇ, ಹಿಂದಿ ಹೇರಿಕೆ ಮಾಡುತ್ತಿದೆ. ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ ನಗರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.