ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅವರ ಡೇಟಿಂಗ್ ಕುರಿತು ಆಗಾಗ ವರದಿಗಳು ಕೇಳಿಬರುತ್ತಲೇ ಇರುತ್ತವೆ. ಇಬ್ಬರೂ ಪ್ರೀತಿಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತವೆ. ಆದರೆ, ಈ ಕುರಿತು ಇದುವರೆಗೆ ಒಬ್ಬರೂ ಬಹಿರಂಗವಾಗಿ ದೃಢಪಡಿಸಿಲ್ಲ. ಇದರ ಮಧ್ಯೆಯೇ ವಿಜಯ್ ದೇವರಕೊಂಡ ಅವರು ರಶ್ಮಿಕಾ ಮಂದಣ್ಣ (Rashmika Mandanna) ಅವರ ನಿಕ್ ನೇಮ್ ಬಹಿರಂಗಪಡಿಸಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಅವರನ್ನು ವಿಜಯ್ ದೇವರಕೊಂಡ ಅವರು “ರಶೀ” ಎಂದು ಕರೆಯುವ ಮೂಲಕ ಅವರ ನಿಕ್ ನೇಮ್ ಅನ್ನು ಬಹಿರಂಗಪಡಿಸಿದ್ದಾರೆ. ಇದರಿಂದಾಗಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಾತುಗಳಿಗೆ ಇನ್ನಷ್ಟು ರೆಕ್ಕೆ-ಪುಕ್ಕಗಳು ಬಂದಂತಾಗಿದೆ. ಇಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುವ ಮೂಲಕ ಜೋಡಿಗೆ ಶುಭ ಹಾರೈಸಿದ್ದಾರೆ. ಅದರಲ್ಲೂ, ಪ್ರೇಮಿಗಳ ದಿನಾಚರಣೆ ಹೊತ್ತಲ್ಲೇ ವಿಜಯ್ ದೇವರಕೊಂಡ ನಿಕ್ ನೇಮ್ ಬಹಿರಂಗಪಡಿಸಿದ್ದು ಭಾರಿ ಸುದ್ದಿಯಾಗಿದೆ.
ವಿಜಯ್ ದೇವರಕೊಂಡ ನಟನೆಯ ಕಿಂಗ್ ಡಮ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ವಿಜಯ್ ದೇವರಕೊಂಡ ಅವರ ರಗಡ್ ಲುಕ್ ಎಲ್ಲರ ಗಮನ ಸೆಳೆದಿದೆ. ಟೀಸರ್ ಬಿಡುಗಡೆಯಾದ ಬಳಿಕ ನಟನಿಗೆ ವಿಶ್ ಮಾಡಿದ ರಶ್ಮಿಕಾ, “ಈ ವ್ಯಕ್ತಿ ಯಾವಾಗಲೂ ಚಿತ್ರವಿಚಿತ್ರವಾಗಿ ಬರುತ್ತಾರೆ. ನಿಮ್ಮ ಬಗ್ಗೆ ನನಗೆ ಭಾರಿ ಹೆಮ್ಮೆಯಾಗುತ್ತದೆ” ಎಂದು ರಶ್ಮಿಕಾ ಮಂದಣ್ಣ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಗೀತಾ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಗೀತಾ ಗೋವಿಂದಂ ಸಿನಿಮಾ ಬಿಡುಗಡೆಯಾದ ಬಳಿಕವೇ ಇಬ್ಬರು ಡೇಟಿಂಗ್ ಮಾಡುತ್ತಿರುವ ಕುರಿತು ಮಾತುಗಳು ಕೇಳಿಬರುತ್ತಿವೆ.