ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೋ ಪರಿಷ್ಕೃತ ದರ ಜಾರಿಯಾಗಲಿದ್ದು, ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಹಲವು ಪ್ರಯಾಣಿಕರು ಮೆಟ್ರೋ ಸಹವಾಸ ಕೈ ಬಿಟ್ಟು, ಬಿಎಂಟಿಸಿ ಬಸ್ ಮೊರೆ ಹೋಗುತ್ತಿದ್ದಾರೆ.
ಮೆಟ್ರೋ ದರದ ಬಗ್ಗೆ ಈಗಾಗಲೇ ಬಿಎಂಆರ್ ಸಿಎಲ್(BMRCL) ಸ್ಪಷ್ಟನೆ ನೀಡಿದೆ. ಸುದ್ದಿಗೋಷ್ಠಿ ನಡೆಸಿರುವ ಬಿಎಂಆರ್ ಸಿಎಲ್ ಎಂಡಿ(BMRCL) ಮಹೇಶ್ವರ ರಾವ್, ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಮೆಟ್ರೋ ಪ್ರಯಾಣ ಏರಿಕೆ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಟ್ಟಾರೆ ಹೆಚ್ಚಳ ದರದಲ್ಲಿ ಯಾವುದೇ ಇಳಿಕೆ ಮಾಡಿಲ್ಲ. ಇತ್ತೀಚೆಗೆ ಹೆಚ್ಚಳ ಮಾಡಿದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೆಟ್ರೋ ದರ ಕನಿಷ್ಠ 10 ರೂ., ಗರಿಷ್ಠ 90 ರೂ. ನಿಗದಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ದರ ಇಳಿಕೆ ಮಾಡುವ ಬದಲು ಕೆಲವು ಸ್ಟೇಜ್ ಗಳ ನಡುವೆ ಹೆಚ್ಚಳವಾಗಿರುವ ದರವನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ಶೇ. 100ಕ್ಕಿಂತ ಅಧಿಕ ದರ ಹೆಚ್ಚಳವಾಗಿರುವ ಮಾರ್ಗಗಳಲ್ಲಿ ಶೇ. 30ರಷ್ಟು ದರ ಇಳಿಕೆ ಮಾಡಲಾಗಿದೆ. ಹೀಗಾಗಿ ಇಂದಿನಿಂದ ಕೆಲವೆಡೆ ಶೇ. 100ರಷ್ಟು ಹೆಚ್ಚಳವಾಗಿದ್ದ ಸ್ಟೇಜ್ ಗಳಲ್ಲಿ ದರ ಇಳಿಕೆಯಾಗಿದೆ. ಇಂದು ಬೆಳಗ್ಗೆಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬಂದಿದೆ.
ಮೆಟ್ರೋ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಕಳೆದ 5 ದಿನಗಳಲ್ಲಿ ಸುಮಾರು 2 ಲಕ್ಷ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ. ಪ್ರತಿ ದಿನ ಸುಮಾರು 40 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಹಲವರು ತಮ್ಮ ಸ್ವಂತ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಹಲವರು ಬಿಎಂಟಿಸಿ ಮೊರೆ ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಅನಿವಾರ್ಯವಾಗಿ ಬಸ್ ಮೊರೆ ಹೋಗುತ್ತಿದ್ದಾರೆ.