ಬೆಂಗಳೂರು: ರಾಜ್ಯದಲ್ಲಿ ಹಲವು ಉದ್ದಿಮೆಗಳನ್ನು ನಡೆಸುತ್ತಿರುವ ಜೆಎಸ್ ಡಬ್ಲ್ಯು ಗ್ರೂಪ್ ಗೆ ರಾಜ್ಯ ಸರ್ಕಾರದಿಂದ ‘ದಶಕದ ಹೂಡಿಕೆದಾರ’ (Investor of the Decade) ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದಲ್ಲಿ ಉದ್ಯಮ ವಲಯದ ಬೆಳವಣಿಗೆಗೆ ಜೆಎಸ್ಡಬ್ಲ್ಯು ಗ್ರೂಪ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ. ಅರಮನೆ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಸಮ್ಮುಖದಲ್ಲಿ ಜೆಎಸ್ಡಬ್ಲ್ಯೂ ಗ್ರೂಪ್ ಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜೆಎಸ್ಡಬ್ಲ್ಯು ಸಿಎಮೆಂಟ್ ಮತ್ತು ಜೆಎಸ್ಡಬ್ಲ್ಯು ಪೇಂಟ್ಸ್ ನ ಎಂಡಿ ಪಾರ್ಥ್ ಜಿಂದಾಲ್ ಈ ಪ್ರಶಸ್ತಿ ಪಡೆದರು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.
ಜೆಎಸ್ಡಬ್ಲ್ಯು ಗ್ರೂಪ್ ಕರ್ನಾಟಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬೆಳೆಯಲು ಹಾಗೂ ಔದ್ಯಮಿಕ ಮೂಲಸೌಕರ್ಯ ಅಭಿವೃದ್ಧಿಗೊಳ್ಳಲು ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲಿ 1.2 ಲಕ್ಷ ಕೋಟಿ ರೂ ಮೊತ್ತದ ಹೂಡಿಕೆಗಳನ್ನು ಈ ಕಂಪನಿ ಮಾಡಿದೆ. ವಿವಿಧ ಉದ್ದಿಮೆಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ.
ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಜೆಎಸ್ಡಬ್ಲ್ಯೂ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ ಹೂಡಿಕೆಗೆ ಒಪ್ಪಿದ್ದು, ಎಂಒಯುಗೆ ಸಹಿ ಹಾಕಿದೆ. ಮುಂದಿನ ಕೆಲ ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂ ಹೂಡಿಕೆ ಮಾಡಲು ಕಂಪನಿ ಬದ್ಧವಾಗಿದೆ ಎಂದು ಗ್ರೂಪ್ ನ ಮುಖ್ಯಸ್ಥ ಸಜ್ಜನ್ ಜಿಂದಾಲ್ ಹೇಳಿದ್ದಾರೆ.