ಲಖನೌ: ಎಸ್ಸೆಸ್ಸೆಲ್ಸಿ, ಪಿಯುಸಿ, ಕೆಎಎಸ್, ಐಎಎಸ್ ಸೇರಿ ಯಾವುದೇ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜೀವನ ಪರೀಕ್ಷೆಗಿಂತ ಶಾಲೆ-ಕಾಲೇಜುಗಳ ಪರೀಕ್ಷೆಗಳೇ ಮುಖ್ಯ ಎಂದು ಭಾವಿಸುವ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳು ಜೆಇಇ ಮುಖ್ಯ ಪರೀಕ್ಷೆಯಲ್ಲಿ (2025) ತೇರ್ಗಡೆಯಾಗದ ಕಾರಣ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಹೌದು, ಅದಿತಿ ಮಿಶ್ರಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯು ಗೋರಖ್ ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಿಶ್ರೌಲಿಯಾ ಗ್ರಾಮದ ಅದಿತಿ ಮಿಶ್ರಾಳನ್ನು ಗೋರಖಪುರ ಕೋಚಿಂಗ್ ಸೆಂಟರ್ ಗೆ ಸೇರಿಸಲಾಗಿತ್ತು. ವಿದ್ಯಾರ್ಥಿನಿಯು ಜೆಇಇ ಪರೀಕ್ಷೆ ಬರೆದು, ತೇರ್ಗಡೆ ಹೊಂದುವ ಬಯಕೆ ಹೊಂದಿದ್ದಳು. ಆದರೆ, ತೇರ್ಗಡೆಯಾಗುವಲ್ಲಿ ವಿಫಲವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಡೆತ್ ನೋಟ್ ನಲ್ಲಿ ಏನಿದೆ?
ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಮಮ್ಮಿ, ಪಪ್ಪಾ ನನ್ನನ್ನು ಕ್ಷಮಿಸಿಬಿಡಿ. ನನಗೆ ನಿಮ್ಮ ಕನಸನ್ನು ನನಸು ಮಾಡಲು ಸಾಧ್ಯವಾಗಲಿಲ್ಲ. ನಿಮ್ಮ ಜತೆಗಿನ ನನ್ನ ಪಯಣ ಇಲ್ಲಿಗೇ ಮುಗಿಯುತ್ತಿದೆ” ಎಂದು ನೇಣಿಗೆ ಕೊರಳೊಡ್ಡುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ.
“ನಾನು ಎಷ್ಟೇ ಪ್ರಯತ್ನ ಮಾಡಿದರೂ ಮುನ್ನಡೆ ಸಾಧಿಸಲು ಆಗಲಿಲ್ಲ. ಇದರಿಂದ ನಿಮಗೂ ನಿರಾಶೆಯಾಗಿದೆ. ಆದರೆ, ನೀವು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳು ನಿಮ್ಮ ಕನಸನ್ನು ಖಂಡಿತವಾಗಿ ನನಸು ಮಾಡುತ್ತಾಳೆ” ಎಂಬುದಾಗಿ ತಂಗಿಯ ಬಗ್ಗೆಯೂ ಉಲ್ಲೇಖಿಸಿದ್ದಾಳೆ. ಮಗಳ ನಿಧನದ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.