ಬೆಂಗಳೂರು: ದರ ಏರಿಕೆ ಮಾಡಿ ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡಿತ್ತು. ಈಗ ಬೆಂಗಳೂರಿಗರೇ ನಮ್ಮ ಮೆಟ್ರೋಗೆ ಶಾಕ್ ನೀಡಿದ್ದಾರೆ.
ಫೆ. 9ರಿಂದ ಮೆಟ್ರೋ ದರ ಏರಿಕೆಯಾಗಿತ್ತು. ಭಾರಿ ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಸಿಲಿಕಾನ್ ಸಿಟಿ ಮಂದಿ ನಮ್ಮ ಮೆಟ್ರೋಗೆ ಶಾಕ್ ನೀಡಿದ್ದಾರೆ. ಬೆಲೆ ಏರಿಕೆಯಿಂದಾಗಿ ಪ್ರಯಾಣಿಕರೇ ಮೆಟ್ರೋ ಕಡೆ ಮುಖ ಮಾಡದೆ ಪರ್ಯಾಯ ಮಾರ್ಗ ಹುಡುಕಿದ್ದಾರೆ. ಹೀಗಾಗಿ ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ಬರೋಬ್ಬರಿ 80 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ.
ಫೆ. 11 ರಂದು ಒಂದೇ ದಿನ ನಮ್ಮ ಮೆಟ್ರೋಗೆ ಸುಮಾರು 80 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಫೆ. 4 ರಂದು 8,58,417 ಜನ ಪ್ರಯಾಣಿಕರು ಪ್ರಯಾಣಿಸಿದ್ದರು. ಫೆ.10 ರಂದು 8,28,149 ರಷ್ಟಿತ್ತು. ದರ ಏರಿಕೆಯ ನಂತರ 7,78,774 ಜನ ಪ್ರಯಾಣಿಕರು ಸಂಚರಿಸಿದ್ದಾರೆ. ಒಟ್ಟಾರೆ 79,643 ಮಂದಿ ಒಂದೇ ದಿನದಲ್ಲಿ ಮೆಟ್ರೋ ಪ್ರಯಾಣವನ್ನು ತೊರೆದಿದ್ದಾರೆ. ಇದು ಮೆಟ್ರೋಗೆ ದೊಡ್ಡ ಹೊಡೆತ ನೀಡಿದಂತಾಗಿದೆ. ಮೌನವಾಗಿಯೇ ಪ್ರಯಾಣಿಕರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಇದರಿಂದ ತಿಳಿಯುತ್ತಿದೆ.
ಹಿಂದೆ ಮೊದಲು ಕಾರ್ಡ್ ಬಳಕೆದಾರರಿಗೆ ಟಿಕೆಟ್ ದರದ ಮೇಲೆ ಶೇ. 5ರಷ್ಟು ರಿಯಾಯಿತಿ ನೀಡಿದ್ದ ನಿಗಮ, ಇದೀಗ ದರ ಹೆಚ್ಚಳದ ಬೆನ್ನಲ್ಲೇ ರಿಯಾಯಿತಿ ಪ್ರಮಾಣವನ್ನು ಶೇ. 10ರಷ್ಟು ಏರಿಸಿದೆ.