ಕಾರವಾರ: ಪದ್ಮಶ್ರೀ ಪುರಸ್ಕೃತ ಜಾನಪದ ಗಾಯಕಿ, ಹಾಡುಹಕ್ಕಿ, ಸುಕ್ರಜ್ಜಿ ಎಂದೇ ಖ್ಯಾತರಾಗಿದ್ದ ಸುಕ್ರಿ ಬೊಮ್ಮಗೌಡ (Sukri Bommagowda) (88) ಅವರು ಇಹಲೋಕ ತ್ಯಜಿಸಿದ್ದಾರೆ. ಜಾನಪದ ಹಾಡುಗಳಿಂದಲೇ ಮನೆಮಾತಾಗಿದ್ದ ಅವರು ಜನಪದ ಹಾಡುಗಳನ್ನು ಹಾಡಿಯೇ ಮದ್ಯಪಾನ ವಿರೋಧಿ ಚಳವಳಿ ಆರಂಭಿಸಿದ್ದರು ಎಂಬುದು ಪ್ರಮುಖ ಸಂಗತಿಯಾಗಿದೆ. ಅವರು ಏಕೆ ಮದ್ಯದ ವಿರುದ್ಧ ಸಮರ ಸಾರಿದರು ಎಂಬುದೇ ರೋಚಕ ಸಂಗತಿಯಾಗಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಹಾಲಕ್ಕಿ ಕುಟುಂಬದಲ್ಲಿ ಸುಕ್ರಜ್ಜಿ ಜನಿಸಿದರು. ತುಂಬ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಮದುವೆ ಮಾಡಲಾಗಿತ್ತು. ಅದರಲ್ಲೂ, ಹಿರಿಯ ವ್ಯಕ್ತಿಯೊಂದಿಗೆ ಸುಕ್ರಿ ಬೊಮ್ಮಗೌ ಡ ಮದುವೆಯಾಗಿತ್ತು. ಅವರಿಗೆ ಮದುವೆಯಾದಾಗ 14 ವರ್ಷ ವಯಸ್ಸು. ಪತಿಗೆ 42 ವರ್ಷ ವಯಸ್ಸಾಗಿತ್ತು ಎಂಬುದನ್ನು ನಂಬಲೇಬೇಕು. ಮಕ್ಕಳಾಗದ ಕಾರಣ ಸುಕ್ರಜ್ಜಿ ಅವರು ಸಹೋದರನ ಪುತ್ರನನ್ನು ದತ್ತು ತೆಗೆದುಕೊಂಡಿದ್ದರು. ಆದರೆ, ಕುಡಿತದ ಚಟದಿಂದ ಆತ ಮೃತಪಟ್ಟಿದ್ದ.
ಬಡಗೇರಿ ಸೇರಿ ಅಂಕೋಲಾ ಸುತ್ತಮುತ್ತ ಮದ್ಯ ಮಾರಾಟದ ಹಾವಳಿ ಜಾಸ್ತಿಯಾಗಿತ್ತು. ಮಗ ಕೂಡ ಕುಡಿತದ ಚಟದಿಂದಲೇ ಮೃತಪಟ್ಟಿದ್ದ. ಇದರಿಂದ ಕುಪಿತಗೊಂಡ ಸುಕ್ರಜ್ಜಿ ಅವರು ಮದ್ಯದ ವಿರುದ್ಧ ಆಂದೋಲನವನ್ನೇ ಆರಂಭಿಸಿದರು. ಜನಪದ ಹಾಡುಗಳಿಂದಲೇ ಬಡಗೇರಿ ಸೇರಿ ಹಳ್ಳಿ ಹಳ್ಳಿಗೆ ತೆರಳಿ ಮದ್ಯದ ವಿರುದ್ಧ ಜನಾಂದೋಲನವನ್ನೇ ಆರಂಭಿಸಿದರು.
ಅಣ್ಣಾವ್ರಿಂದ ಮೆಚ್ಚುಗೆ
ಡಾ.ರಾಜಕುಮಾರ್ , ರಾಮಕೃಷ್ಣ ಹೆಗಡೆ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಸುಕ್ರಜ್ಜಿ ಅವರು ಜಾನಪದ ಹಾಡು ಹಾಡಿದ್ದರು. ಇದರಿಂದ ಪುಳಕಿತರಾದ ಡಾ.ರಾಜಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸುಮಾರು 5 ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಹಾಡಿದ್ದ ಸುಕ್ರಜ್ಜಿ ಅವರಿಗೆ ಸುಕ್ರಜ್ಜಿ ಅವರಿಗೆ 1999ರಲ್ಲಿ ಜನಪದ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ ಹಾಗೂ 2017ರಲ್ಲಿ ಪದ್ಮಶ್ರೀ ಸೇರಿ ಹಲವು ಪ್ರಶಸ್ತಿಗಳು ಒಲಿದು ಬಂದಿದ್ದವು. ಧಾರವಾಡದ ಆಕಾಶವಾಣಿಯಲ್ಲೂ ಹಾಡುಗಳನ್ನು ಹಾಡಿದ್ದ ಸುಕ್ರಜ್ಜಿ ಇನ್ನು ನೆನಪು ಮಾತ್ರ ಎಂಬುದು ಬೇಸರದ ಸಂಗತಿಯಾಗಿದೆ.