ಕಾರವಾರ: ಪದ್ಮಶ್ರೀ, ನಾಡೋಜಾ ಪುರಸ್ಕೃತೆ ಹಾಗೂ ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ (91) (Sukri Bommagowda) ಇಹಲೋಕ ತ್ಯಜಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಸುಕ್ರಿ ಬೊಮ್ಮಗೌಡ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡಿ ಪ್ರಸಿದ್ಧಿ ಹೊಂದಿದ್ದರು. ಹೀಗಾಗಿಯೇ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾಗಿದ್ದ ಸುಕ್ರಿ ಬೊಮ್ಮಗೌಡ ಅವರು ಗ್ರಾಮವನ್ನು ಮದ್ಯ ಮುಕ್ತ ಮಾಡಿದ್ದರು. 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ (Padma Shri Award) ಸಂದಿತ್ತು. ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿ ಪಡೆದಿದ್ದ ಇವರು, ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಚಿಕಿತ್ಸೆ ಪಡೆದು ಮರಳಿ ಮನೆಗೆ ಬಂದಿದ್ದರು. ಆದರೆ, ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಮೊಮ್ಮೊಕ್ಕಳು, ಓರ್ವ ಸೊಸೆಯನ್ನು ಅಗಲಿದ್ದಾರೆ. ಇಂದು ಬಡಿಗೇರಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.