ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ (DK Shivakumar) ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ನಲ್ಲೇ ತೆರೆಮರೆಯ ಕಸರತ್ತು ನಡೆಯುತ್ತಿದೆ. ಕೆಲವು ನಾಯಕರು ಬಹಿರಂಗವಾಗಿಯೇ ನಾಯಕತ್ವ ಬದಲಾವಣೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ, “ಹಲವು ರಾಜ್ಯಗಳ ಘಟಕದ ಅಧ್ಯಕ್ಷರನ್ನು ಬದಲಾಯಿಸಲಾಗುವುದು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಒಡಿಶಾದಲ್ಲಿ ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಾಯಿಸಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ರಾಜ್ಯಗಳ ಅಧ್ಯಕ್ಷರನ್ನು ಬದಲಾಯಿಸಲಾಗುವುದು” ಎಂದು ಹೇಳಿದ್ದಾರೆ. ಕರ್ನಾಟಕದಲ್ಲೂ ಬದಲಾವಣೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇನ್ನೊಂದು ವಾರದಲ್ಲಿ ಎಲ್ಲವೂ ನಿರ್ಧಾರವಾಗಲಿದೆ” ಎಂದಷ್ಟೇ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಈಗಾಗಲೇ ತೀವ್ರ ಪೈಪೋಟಿ ಶುರುವಾಗಿದೆ. ಸತೀಶ್ ಜಾರಕಿಹೊಳಿ(Satish Jarakiholi) ಅವರು ದೆಹಲಿಗೆ ಭೇಟಿ ನೀಡಿ, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಕೆ.ಎನ್.ರಾಜಣ್ಣ ಅವರು ಕೂಡ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ವಾರ ಡಾ.ಜಿ.ಪರಮೇಶ್ವರ್ ಅವರೂ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಹಾಗಾಗಿ, ಖರ್ಗೆ ಅವರ ಮಾತಿನಿಂದ ಇವರೆಲ್ಲರ ನಿರೀಕ್ಷೆಗಳು ಹೆಚ್ಚಾಗಿವೆ.
ಭಕ್ತಿಯ ಮೊರೆಹೋದ ಡಿಕೆಶಿ
ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಅವರು ಮಾತ್ರ ಭಕ್ತಿಯ ಮೊರೆ ಹೋಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪ್ರಯಾಗರಾಜ್ ಕುಂಭಮೇಳದಲ್ಲಿ ಮಿಂದೆದ್ದು ಬಂದಿದ್ದ ಡಿಕೆಶಿ ಅವರೀಗ ಟಿ.ನರಸೀಪುರ ಕುಂಭಮೇಳದ ತ್ರಿವೇಣಿ ಸಂಗಮದಲ್ಲೂ ಮಿಂದೆದ್ದಿದ್ದಾರೆ. ಅಲ್ಲದೆ, “ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆಗೆ ಗೆಲುವು ನಿಶ್ಚಿತ” ಎಂಬ ಮಾರ್ಮಿಕ ಪೋಸ್ಟ್ ಅನ್ನೂ ಹಂಚಿಕೊಂಡಿದ್ದಾರೆ.