ಬೆಂಗಳೂರು: 90 ರ ಕಾಲಘಟ್ಟದ ಪ್ರೇಮ ಕಥಾನಕ ಚಿತ್ರವೊಂದು ಫೆ. 28ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿ ನಿಂತಿದ್ದು, ಇಂದು ಟ್ರೇಲರ್ ಬಿಡುಗಡೆಯಾಯಿತು.
ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ C M ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ನಾಯಕ, ನಾಯಕಿಯಾಗಿ ನಟಿಸಿರುವ “1990s” ಚಿತ್ರ 90ರ ಕಾಲಘಟ್ಟದಲ್ಲಿ ನಡೆಯುವ ಪ್ರೇಮ ಕಥೆ ಈ ಚಿತ್ರದ ಹೂರಣವಾಗಿದೆ.
ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. “ತಟ್ ಅಂತ ಹೇಳಿ” ಕಾರ್ಯಕ್ರಮ ಹಾಗೂ ತಮ್ಮ ಪರಿಶುದ್ಧ ಕನ್ನಡದ ಮಾತಿನ ಮೂಲಕ ಜನಪ್ರಿಯರಾಗಿರುವ ಡಾ. ನಾ.ಸೋಮೇಶ್ವರ ಹಾಗೂ ಪತ್ರಕರ್ತ, ನಟ, ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ “1990s” ಚಿತ್ರದ ಟ್ರೇಲರ್ ಅನಾವರಣ ಮಾಡಿದರು.
ಈ ವೇಳೆ ಮಾತನಾಡಿದ ಡಾ. ನಾ.ಸೋಮೇಶ್ವರ್, ಶುದ್ದ ಕನ್ನಡದ ಮಾತುಗಳ ಮೂಲಕ ಟ್ರೇಲರ್ ಹಾಗೂ ಹಾಡಿನ ವಿಮರ್ಶೆ ಮಾಡಿ, ಹೊಸಬರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಇಂದ್ರಜಿತ್ ಲಂಕೇಶ್ ಮಾತನಾಡಿ, ಟಿಕೆಟ್ ಬೆಲೆ ಕಡಿಮೆ ಆಗಬೇಕು ಹಾಗೂ ಕೆಲವು ಚಿತ್ರ ಮಂದಿಗಳಲ್ಲಿ ಆಸನ ಸೇರಿದಂತೆ ಎಲ್ಲ ವ್ಯವಸ್ಥೆಗಳು ಸರಿ ಹೋಗಬೇಕು ಎಂದು ಸಲಹೆ ನೀಡಿದರು. ಟ್ರೇಲರ್ ಚೆನ್ನಾಗಿದೆ. ಚಿತ್ರ ಸಹ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ ಎಂದರು.
ಚಿತ್ರದ ಹೆಸರು ಹೇಳುವಂತೆ ನಮ್ಮ ಚಿತ್ರದ ಕಥೆ 90 ರ ಕಾಲಘಟ್ಟದ್ದು. ಪ್ರೇಮಕಥೆ ಪ್ರಧಾನವಾದರೂ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ಸಿ.ಎಂ.ನಂದಕುಮಾರ್ ತಿಳಿಸಿದರು.
ನಿರ್ಮಾಪಕ ಅರುಣ್ ಕುಮಾರ್, ನಾಯಕ ಅರುಣ್ ಹಾಗೂ ನಾಯಕಿ ರಾಣಿ ವರದ್ ಈ ವೇಳೆ ಇದ್ದರು. ನಟ ದೇವ್, ಸಂಗೀತ ನಿರ್ದೇಶಕ ಮಹಾರಾಜ, ಛಾಯಾಗ್ರಾಹಕ ಹಾಲೇಶ್, ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಸೇರಿದಂತೆ ಹಲವರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿದ್ದರು.