ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳವು ಹತ್ತಾರು ವಿಶೇಷ ಸಂಗತಿಗಳಿಗೆ ಸಾಕ್ಷಿಯಾಗುತ್ತಿದೆ. ದಾಖಲೆಯ ಸಂಖ್ಯೆಯಲ್ಲಿ ಜನ ತ್ರಿವೇಣಿ ಸಂಗಮದಲ್ಲಿ (Maha Kumbh 2025) ಮಿಂದೇಳುತ್ತಿದ್ದಾರೆ. ಸಂಸ್ಕೃತಿಗೆ ಭಂಗವಾಗದಂತೆ ಕುಂಭಮೇಳ ಸಾಗುತ್ತಿದೆ. ದೇಶ-ವಿದೇಶದಿಂದ ಯಾತ್ರಿಕರು ಆಗಮಿಸುತ್ತಿದ್ದಾರೆ. ಇದರ ಮಧ್ಯೆಯೇ, ಮಹಾ ಕುಂಭಮೇಳವು ವಿಶೇಷ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ.
ಹೌದು, ಕುಂಭಮೇಳದಲ್ಲಿ ಭಾರತದ ಸಿದ್ಧಾರ್ಥ್ ಹಾಗೂ ಗ್ರೀಸ್ ದೇಶದ ಪೆನೆಲೋಪ್ ಅವರು ವೈದಿಕ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಎರಡೂ ಕುಟುಂಬಗಳ ಉಪಸ್ಥಿತಿಯಲ್ಲಿ ಸ್ವಾಮಿ ಯತೀಂದ್ರನಾಥ ಗಿರಿ ಅವರು ಮದುವೆ ನಡೆಸಿಕೊಟ್ಟಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈಗ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾತ್ರಿಕರು ಕೂಡ ಇವರ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ಧಾರ್ಥ ಹಾಗೂ ಪೆನೆಲೋಪ್ ಅವರು ಸನಾತನ ಪ್ರೇಮಿಗಳಾಗಿದ್ದು, ಹಿಂದು ಧರ್ಮದಲ್ಲಿ ನಂಬಿಕೆ ಇರಿಸಿದ್ದಾರೆ. ನಾವಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈಗ ಮಹಾ ಕುಂಭಮೇಳದಂತಹ ಪುಣ್ಯಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದು ಖುಷಿ ತಂದಿದೆ. ಅದರಲ್ಲೂ ಸನಾತನ ಧರ್ಮದ ಪುಣ್ಯಭೂಮಿಯಲ್ಲಿ, ವೈದಿಕ ಸಂಪ್ರದಾಯದಂತೆ ಮದುವೆಯಾಗಿರುವುದು ಸಂತಸ ಉಂಟುಮಾಡಿದೆ ಎಂದು ಸಿದ್ಧಾರ್ಥ ತಿಳಿಸಿದ್ದಾರೆ. ಇಬ್ಬರೂ ಅನ್ಯೋನ್ಯವಾಗಿ ಸಂಸಾರ ನಡೆಸಿಕೊಂಡು ಹೋಗುತ್ತೇವೆ. ನಮ್ಮ ಜೀವನದಲ್ಲಿ ಇದು ಮಹತ್ವದ ಕ್ಷಣ ಎಂದು ಅವರು ಹೇಳಿದ್ದಾರೆ.
ಹಿಂದುತ್ವದ ಮೇಲೆ ಹೆಚ್ಚಿನ ಗೌರವ
ಪೆನೆಲೋಪ್ ಅವರಿಗೆ ಭಾರತದ ಮೇಲೆ, ಹಿಂದುತ್ವದ ಮೇಲೆ ಎಲ್ಲಿಲ್ಲದ ಗೌರವ ಇದೆ. ಹಾಗೆ ನೋಡಿದರೆ, ಸಿದ್ಧಾರ್ಥ್ ಅವರು, ನೀನು ಎಲ್ಲಿ ಮದುವೆಯಾಗಲು ಬಯಸುತ್ತೀಯ? ಗ್ರೀಸ್ ನಲ್ಲಿ ಎಂದರೂ ಓಕೆ ಎಂದಿದ್ರು. ಆದ್ರೆ, ನಾನು ಭಾರತದಲ್ಲೇ, ಅದರಲ್ಲೂ ವೈದಿಕ ಸಂಪ್ರದಾಯದಂತೆಯೇ ಮದುವೆಯಾಗುತ್ತೇನೆ ಎಂದು ಪೆನೆಲೋಪ್ ಹೇಳಿದರು. ಇನ್ನು ಕನ್ಯಾದಾನ ಪ್ರಕ್ರಿಯೆ ನಡೆಸಿಕೊಟ್ಟ ಸ್ವಾಮಿ ಯತೀಂದ್ರನಾಥ ಗಿರಿ ಅವರು ಕೂಡ ಇಬ್ಬರ ಮದುವೆ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಪೆನೆಲೋಪ್ ಅವರು ಹಲವು ವರ್ಷಗಳಿಂದ ಭಾರತದಲ್ಲಿಯೇ ಇದ್ದಾರೆ. ಹತ್ತಾರು ವರ್ಷಗಳಿಂದ ಯೋಗ ತರಬೇತಿಯಲ್ಲಿ ನಿರತರಾಗಿರುವ ಇವರು, ಜನರಿಗೆ ಯೋಗದ ಮಹತ್ವ ಸಾರುತ್ತಿದ್ದಾರೆ. ಇವರು ಮೊದಲು ಬೌದ್ಧ ಧರ್ಮದ ಆಚರಣೆಗಳಿಂದ ಪ್ರೇರೇಪಣೆಗೊಂಡಿದ್ದರು. ಭಾರತದಲ್ಲಿ ಎಲ್ಲ ಧರ್ಮಗಳಿಗೂ ಸನಾತನ ಧರ್ಮವೇ ಮೂಲ ಎಂಬುದನ್ನು ಅರಿತು ಇವರು ಸನಾತನ ಧರ್ಮದ ಆಚರಣೆಗಳನ್ನು ಪಾಲಿಸುತ್ತಿದ್ದಾರೆ.
ಇನ್ನು, ಮದುವೆಯಾಗಿದ್ದಕ್ಕೆ ಪೆನೆಲೋಪ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. “ನಾನು ಶಾಂತಿಯುತ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಇಷ್ಟಪಡುತ್ತೇನೆ. ಅದಕ್ಕಾಗಿ ಭಾರತದಲ್ಲಿ, ಭಾರತದ ಯುವಕನನ್ನು ಮದುವೆಯಾದೆ. ನಾನು ಮೊದಲು ಬೌದ್ಧ ಧರ್ಮದ ಆಚಾರ-ವಿಚಾರಗಳನ್ನು ಪಾಲಿಸುತ್ತಿದ್ದೆ. ಆದರೆ, ಎಲ್ಲವೂ ಸನಾತನ ಧರ್ಮದಿಂದಲೇ ಪ್ರೇರೇಪಣೆಗೊಂಡಿದ್ದನ್ನು ತಿಳಿದು, ಈಗ ಸನಾತನ ಧರ್ಮವನ್ನು ಪಾಲಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಜಾತಿ, ಧರ್ಮ, ಭಾಷೆಯ ಗಡಿ ಇಲ್ಲದೆ ಮದುವೆಯಾಗಿರುವ ಈ ನವಜೋಡಿಗೆ ಶುಭವಾಗಲಿ.