ಚಾಮರಾಜನಗರ: ನಟ ಚೇತನ್ ಅಹಿಂಸಾ ಅವರು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಮರಾಜನಗರದಲ್ಲಿ ಹಲವು ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಜನರಿಗೆ ಭರವಸೆ ನೀಡಿ, ಅವುಗಳನ್ನು ಈಡೇರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಸಿಡಿದೇಳಬೇಕು” ಎಂದು ಕರೆ ನೀಡಿದರು.
ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಕೋಮುವಾದ ಎಂದು ವಿರೋಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಕೋಮುವಾದ ಹತ್ತಿಕ್ಕುವಲ್ಲಿಯೂ ವಿಫಲವಾಗಿದೆ. ಕರ್ನಾಟಕಕ್ಕೆ ಪರ್ಯಾಯ ಬೇಕಿದೆ, ಜನರ ಆಕ್ರೋಶ ಹೆಚ್ಚಾಗುತ್ತಿದೆ. ನಮಗೆ ಅಧಿಕಾರದ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿಲ್ಲ. ಜನರ ಬಗ್ಗೆ ಕಾಳಜಿ ಇರೋ ಸರ್ಕಾರ ಬೇಕಿದೆ ಎಂದು ಹೇಳಿದರು..
ಕಾಂಗ್ರೆಸ್ ಸರ್ಕಾರ ಭರವಸೆ ಕೊಡುವುದರಲ್ಲಿ ಎತ್ತಿದ ಕೈ. ಕೇವಲ ಅಧಿಕಾರಕ್ಕೆ ಬರಲು ಸುಳ್ಳು ಭರವಸೆ ನೀಡಲಾಗಿತ್ತು. ಅಧಿಕಾರ ಬಂದ ನಂತರ ಇಚ್ಛಾಶಕ್ತಿ ಕೊರತೆಯಿಂದ ಯಾವುದೇ ಭರವಸೆಗಳನ್ನೂ ಜಾರಿಗೆ ತಂದಿಲ್ಲ. ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಿಲ್ಲ. ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ರೈತವಿರೋಧಿ ಕಾನೂನು ತೆಗೆಯಲಿಲ್ಲ. ರಾಜ್ಯ ಸರ್ಕಾರದಿಂದ ಕನ್ನಡದ ಜನತೆಗೆ ಯಾವುದಕ್ಕೂ ನ್ಯಾಯ ಸಿಗಲಿಲ್ಲ ಎಂದು ಟೀಕಿಸಿದರು.
ಎಸ್ಡಿಪಿಐ, ಕನ್ನಡಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಅವಘಡಗಳಿಗೆ ತುತ್ತಾಗಿ ಸರ್ಕಾರದ ಭರವಸೆ ನಂಬಿಕೊಂಡು ಕುಳಿತಿರುವ ಸಂತ್ರಸ್ತರು ಸೇರಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು. ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಆಗ್ರಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸಿದರು.