ಕೊಟ್ಟಾಯಂ: ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ಮತ್ತೊಂದು ಭಯಾನಕ ರ‍್ಯಾಗಿಂಗ್ ಘಟನೆ ಬೆಳಕಿಗೆ ಬಂದಿದೆ. ಜ್ಯೂನಿಯರ್ ಗಳನ್ನು ನಗ್ನಗೊಳಿಸಿ, ಅವರ ಖಾಸಗಿ ಅಂಗಕ್ಕೆ ಡಂಬೆಲ್ಸ್‌ಗಳನ್ನು ನೇತು ಹಾಕಿ, ಕಂಪಾಸ್ ಬಾಕ್ಸ್‌ನಲ್ಲಿರುವ ಸಾಧನಗಳಿಂದ ಚುಚ್ಚಿ, ಹಲ್ಲೆ ನಡೆಸಿ ಸತತ 3 ತಿಂಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಗಿದೆ. ಘಟನೆ ಸಂಬಂಧ ತೃತೀಯ ವರ್ಷದ ಐವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ತಿರುವನಂತಪುರಂ ಮೂಲದ ಮೂವರು ಪ್ರಥಮ ವರ್ಷದ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ ಬಳಿಕ ವಿಚಾರ ಬಹಿರಂಗವಾಗಿದೆ. 2024ರ ನವೆಂಬರ್ ನಲ್ಲಿ ಆರಂಭವಾದ ಸರಣಿ ಚಿತ್ರಹಿಂಸೆಯು ಸತತ 3 ತಿಂಗಳ ಕಾಲ ನಡೆದಿತ್ತು ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ದೂರಿನ ಮೇರೆಗೆ 5 ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ರ‍್ಯಾಗಿಂಗ್ ನಿಗ್ರಹ ಕಾಯ್ದೆಯನ್ವಯ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಕಿರಿಯ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಅವರನ್ನು ಸಂಪೂರ್ಣವಾಗಿ ಬೆತ್ತಲೆಗೊಳಿಸುತ್ತಿದ್ದರು. ಬಳಿಕ ಅವರ ಖಾಸಗಿ ಅಂಗಗಳಿಗೆ ಡಂಬೆಲ್ಸ್‌ಗಳನ್ನು ನೇತು ಹಾಕಲಾಗುತ್ತಿತ್ತು. ಚೂಪಾದ ಸಾಧನಗಳಿಂದ ಮೈಗೆಲ್ಲಾ ಚುಚ್ಚಲಾಗುತ್ತಿತ್ತು. ಅಷ್ಟಕ್ಕೇ ಸುಮ್ಮನಾಗದ ಆರೋಪಿಗಳು, ಗಾಯಗಳ ಮೇಲೆ ಲೋಷನ್ ಹಚ್ಚುವ ಮೂಲಕ ಮತ್ತಷ್ಟು ನೋವುಂಟುಮಾಡುತ್ತಿದ್ದರು.

ನೋವು ತಾಳಲಾರದೇ ಜೋರಾಗಿ ಕಿರುಚಿದಾಗ ಅದೇ ಲೋಷನ್ ಅನ್ನು ಬಾಯಿಯೊಳಗೆ ತುರುಕುತ್ತಿದ್ದರು. ಆರೋಪಿಗಳು ತಾವೇ ಈ ಎಲ್ಲ ಕೃತ್ಯಗಳ ವಿಡಿಯೋ ಚಿತ್ರೀಕರಣವನ್ನೂ ಮಾಡಿಕೊಂಡು, ಬಾಯಿಬಿಟ್ಟರೆ ಸುಮ್ಮನಿರಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದರು. ಶೈಕ್ಷಣಿಕ ಭವಿಷ್ಯ ಹಾಳಾಗಬಾರದೆಂಬ ಉದ್ದೇಶದಿಂದ ಬಹುತೇಕ ಮಂದಿ ದೂರು ಕೊಡುವ ಧೈರ್ಯ ಮಾಡಲಿಲ್ಲ ಎಂದು ದೂರಿನಲ್ಲಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇದರ ಜೊತೆಗೆ, ಆರೋಪಿಗಳು ನಿರಂತರವಾಗಿ ಭಾನುವಾರದಂದು ಮದ್ಯಪಾನ ಸೇವಿಸಲು ಕಿರಿಯ ವಿದ್ಯಾರ್ಥಿಗಳಿಂದ ಹಣ ಕಿತ್ತುಕೊಳ್ಳುತ್ತಿದ್ದರು. ಈ ದೌರ್ಜನ್ಯ ತಾಳಲಾರದೇ ಒಬ್ಬ ವಿದ್ಯಾರ್ಥಿಯು ಎಲ್ಲ ವಿಷಯಗಳನ್ನೂ ತನ್ನ ತಂದೆಯ ಬಳಿ ಹೇಳಿಕೊಂಡ ಕಾರಣ, ಅವರ ಸಲಹೆಯ ಮೇರೆಗೆ ವಿದ್ಯಾರ್ಥಿಗಳಿಗೆ ಪೊಲೀಸರಿಗೆ ದೂರು ನೀಡಲು ಧೈರ್ಯ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಐವರು ಆರೋಪಿಗಳು ಸದ್ಯ ಪೊಲೀಸ್ ವಶದಲ್ಲಿದ್ದು, ಇಂದು ಮಧ್ಯಾಹ್ನ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಕೆಲವು ವಾರಗಳ ಹಿಂದಷ್ಟೇ ಕೊಚ್ಚಿಯಲ್ಲಿ 15 ವರ್ಷದ ಶಾಲಾ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದ. ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಮಾಡಿದ ರ‍್ಯಾಗಿಂಗ್‌ನಿಂದಾಗಿಯೇ ಮಗ ಪ್ರಾಣ ಕಳೆದುಕೊಂಡ ಎಂದು ಬಾಲಕನ ತಾಯಿ ದೂರಿದ್ದರು.