ಬೆಂಗಳೂರು: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ 2025ರ ಚಾಂಪಿಯನ್ಸ್ ಟ್ರೋಫಿಗೆ (Champions Trophy 2025) ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸುವಂತೆ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ. ಭಾರತದ ತಾರಾ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಇನ್ನೂ ಬೆನ್ನಿನ ನೋವಿನಿಂದ ಬಳಲುತ್ತಿದ್ದಾರೆ ಮತ್ತು ಅವರು ಈ ಟೂರ್ನಮೆಂಟ್ ಅನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ವೇಗದ ಬೌಲರ್ ಶಮಿ ಸಹ ಇತ್ತೀಚೆಗೆ ಮರಳಿದ್ದಾರೆ. ಈ ಕಾರಣಕ್ಕಾಗಿ ಭಾರತದ ಪರ ಪ್ರಮುಖ ಟೂರ್ನಿಗಳನ್ನು ಆಡಿದ ಅನುಭವ ಹೊಂದಿರುವ ಸಿರಾಜ್‌ಗೆ ಬೆಂಬಲ ಸೂಚಿಸಿದ್ದಾರೆ.
ಭಾರತ ತಂಡದ ಬ್ಯಾಟಿಂಗ್ ಕ್ರಮವು ಸ್ಥಿರವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ. ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಆಡುತ್ತಾರೆ. ನಂತರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ. ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ಉಳಿದ ಬ್ಯಾಟಿಂಗ್ ಸ್ಥಾನಗಳನ್ನು ತುಂಬಬಹುದು. ನಂತರ ಒಂದು ಸ್ಪಿನ್ನರ್ ಮತ್ತು ಎರಡು ವೇಗದ ಬೌಲರ್‌ಗಳ ಆಯ್ಕೆ ಬಾಕಿ ಉಳಿಯುತ್ತದೆ. ಬುಮ್ರಾ ಸಮಯಕ್ಕೆ ಸರಿಯಾಗಿ ಗುಣಮುಖರಾಗದಿದ್ದರೆ, ಸಿರಾಜ್‌ಗೆ ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಸ್ಥಾನವನ್ನು ಸಿರಾಜ್‌ಗೆ ನೀಡುವಂತೆ ಚೋಪ್ರಾ ಸಲಹೆ ನೀಡಿದ್ದಾರೆ.
ಜೈಸ್ವಾಲ್ ಅವರು ಇಂಗ್ಲೆಂಡ್ನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಕಟಕ್‌ನಲ್ಲಿ ನಡೆದ ಎರಡನೇ ಪಂದ್ಯಕ್ಕೆ ಕೊಹ್ಲಿ ಮರಳಿದ ಕಾರಣ ಆಡಿಸಿರಲಿಲ್ಲ. ಶ್ರೇಯಸ್ ಅಯ್ಯರ್ ಅವರು ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಸ್ಥಾನ ಸಾಬೀತು ಮಾಡಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಬ್ಯಾಟಿಂಗ್ ಕ್ರಮದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇಲ್ಲ, ಹೀಗಾಗಿ ಜೈಸ್ವಾಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಟವಾಡದಿರಬಹುದು ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
“ಬ್ಯಾಟಿಂಗ್ ಕ್ರಮ ಸ್ಥಿರವಾಗಿದೆ. ರೋಹಿತ್ ರನ್ ಗಳಿಸಲು ಪ್ರಾರಂಭಿಸಿದ್ದಾರೆ. ಶುಭ್ಮನ್ ಗಿಲ್ ನಮ್ಮ ಉಪನಾಯಕನಾಗಿದ್ದು, ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಕೂಡ ಶೀಘ್ರವೇ ಫಾರ್ಮ್‌ಗೆ ಮರಳಲಿದ್ದಾರೆ. ಇಲ್ಲದಿದ್ದರೂ ಭಾರತ ತಂಡ ಕೊಹ್ಲಿ ಅವರನ್ನು ಕೈಬಿಡಲು ಸಾಧ್ಯವಿಲ್ಲ. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಸ್ಥಿರರಾಗಿದ್ದಾರೆ. ಐದನೇ ಸ್ಥಾನದಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್ ಅಥವಾ ಅಕ್ಷರ್ ಪಟೇಲ್ ಯಾರಾದರೂ ಇರಬಹುದು,” ಎಂದು ಚೋಪ್ರಾ ಅವರ ಯೂಟ್ಯೂಬ್ ಶೋದಲ್ಲಿ ಹೇಳಿದ್ದಾರೆ.
“ನೀವು ಯಶಸ್ವಿ ಜೈಸ್ವಾಲ್ ಅವರನ್ನು ಅಗತ್ಯವಿಲ್ಲದೆ ಇದ್ದರೆ ಬಿಡಬಹುದು. ಬ್ಯಾಟಿಂಗ್ ಕ್ರಮದಲ್ಲಿ ಎಡಗೈ-ಬಲಗೈ ಜೋಡಿಯನ್ನು ಉಳಿಸಬೇಕು ಎಂದು ಯೋಚಿಸಿದ್ದರೆ ಈಗ ಅದು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.
ಬುಮ್ರಾ ತಮ್ಮ ಸಂಪೂರ್ಣ ಫಿಟ್ನೆಸ್ ಮರಳಿಸಲು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂಬ ವರದಿಯಿದೆ. ಭಾರತ ತಂಡ ಯುಎಇಗೆ ಪ್ರಯಾಣಿಸುವ ಮುನ್ನ ಅವರ ಲಭ್ಯತೆ ಕುರಿತ ಅಂತಿಮ ತೀರ್ಮಾನ ಪ್ರಕಟವಾಗಲಿದೆ.