ಹಾಸನ: ರಾಜ್ಯದಲ್ಲಿಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ತಡೆಯಲು ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ತರಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಸಾಲ ವಸೂಲಿ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾರ್ವಜನಿಕರಿಗೆ ಕಿರುಕುಳ ನೀಡುವ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಹಾಸನ ತಾಲೂಕಿನ ದೊಡ್ಡ ಆಲದಹಳ್ಳಿಯಲ್ಲಿಕುಟುಂಬವೊಂದು ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳದಿಂದಾಗಿ ಕೊಟ್ಟಿಗೆಯಲ್ಲೇ ವಾಸಿಸುತ್ತಿದ್ದ ಪ್ರಕರಣ ಬಯಲಾಗಿದೆ.
ಸಾಲ ಮರುಪಾವತಿಸದ ಕಾರಣ ಮೈಕ್ರೋ ಫೈನಾನ್ಸ್ ಕಂಪನಿಯು ಮನೆಗೆ ಬೀಗ ಹಾಕಿದ್ದ ಪರಿಣಾಮ ಇಡೀ ಕುಟುಂಬವು ತಿಂಗಳುಗಟ್ಟಲೆ ಕೊಟ್ಟಿಗೆಯಲ್ಲೇ ವಾಸಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದ ರೈತ ಸಂಘದ ಮುಖಂಡರು ಬೀಗ ಒಡೆದು ಕುಟುಂಬವನ್ನು ಮನೆಗೆ ಸೇರಿಸಿದ್ದಾರೆ.
ಮನೆ ನಿರ್ಮಾಣಕ್ಕೆಂದು ಮೈಕ್ರೋ ಫೈನಾನ್ಸ್ನಿಂದ ಸಾಲ ಮಾಡಿದ್ದ ಮಂಜೇಗೌಡ ಕುಟುಂಬ ಅದನ್ನು ಮರುಪಾವತಿ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಕಂಪನಿಯ ಸಿಬ್ಬಂದಿ ಮನೆಗೆ ಬೀಗ ಹಾಕಿ ಕುಟುಂಬವನ್ನು ಹೊರ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿ ಸಾಲ ಮರುಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ತಿಳಿಸಿದರೂ ಮೈಕ್ರೊ ಫೈನಾನ್ಸ್ ನವರು ಕರುಣೆ ತೋರಲಿಲ್ಲ. ಗೃಹಪ್ರವೇಶಕ್ಕೂ ಮುನ್ನವೇ ಮನೆಗೆ ಬೀಗ ಹಾಕಿದ್ದರು ಎಂದು ಮಂಜೇಗೌಡರ ಕುಟುಂಬ ಆರೋಪಿಸಿದೆ. ಮನೆಯಿಲ್ಲದೆ ಕುಟುಂಬದವರು ಕೊಟ್ಟಿಗೆಯಲ್ಲಿನೆಲೆಸಿದ್ದನ್ನು ತಿಳಿದ ರೈತ ಸಂಘದ ಮುಖಂಡರು ಸಮಸ್ಯೆ ಬಗೆಹರಿಸಿದ್ದಾರೆ. ಕಣಗಾಲ್ ಮೂರ್ತಿ ನೇತೃತ್ವದಲ್ಲಿಮೂರೂ ಬೀಗಗಳನ್ನು ಒಡೆದು ಮಂಜೇಗೌಡ ಕುಟುಂಬಸ್ಥರನ್ನು ಮನೆಯೊಳಗೆ ಸೇರಿಸಿದ್ದಾರೆ.