ಬೆಂಗಳೂರು: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣವು ಕೆಲ ನಿರ್ಣಯಗಳನ್ನು ತೆಗೆದುಕೊಂಡಿದೆ. ಅದರಲ್ಲೂ. ಮೂವರು ಲಿಂಗಾಯತ ನಾಯಕರಲ್ಲಿ ಯಾರಾದರೂ ಬಿಜೆಪಿ ರಾಜ್ಯಾಧ್ಯಕ್ಷರಾಗಲಿ. ಇವರಲ್ಲಿ ಒಬ್ಬರಾದರೂ, ಅವರಿಗೆ ನಮ್ಮ ಬೆಂಬಲವಿದೆ ಎಂಬುದಾಗಿ ದೆಹಲಿಯಲ್ಲಿ ವಿ.ಸೋಮಣ್ಣ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಲಿಂಗಾಯತ ಶಾಸಕರು, ಮಾಜಿ ಸಚಿವರು, ಸಂಸದರು ಸೇರಿ ಹಲವರು ವಿ.ಸೋಮಣ್ಣ ನಿವಾಸದಲ್ಲಿ ನಡೆಸಿದ ಸಭೆಯು ಪ್ರಾಮುಖ್ಯತೆ ಪಡೆದಿದೆ. ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ವಿ. ಸೋಮಣ್ಣ ಅವರಲ್ಲಿ ಯಾರನ್ನಾದರೂ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ. ಮೂವರು ಹಿರಿಯ ನಾಯಕರಲ್ಲಿ ಯಾರಾದರೂ ಅವರಿಗೆ ಬೆಂಬಲ ಇರಲಿದೆ ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಭೇಟಿಯಾದ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವರು ಟವೆಲ್ ಹಾಕಿರುವ ಮಧ್ಯೆಯೇ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅಭಿವೃದ್ಧಿ ಕೆಲಸಗಳಿಗಾಗಿ ಭೇಟಿಯಾಗಿದ್ದೇನೆ ಎಂಬುದಾಗಿ ಸೋಮಣ್ಣ ಹೇಳಿಕೊಂಡಿದ್ದರೂ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ನಾನೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದಾಗಿ ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಹೇಳಿದ್ದಾರೆ. ಆದರೆ, ಅವರು ಕೂಡ ಹಿರಿಯ ನಾಯಕರಲ್ಲಿ ಯಾರಾದರೂ ಒಬ್ಬರು ರಾಜ್ಯಾಧ್ಯಕ್ಷರಾದರೆ ಬೆಂಬಲವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ, ಘೋಷಣೆ ಮಾಡಿಲ್ಲ.