ಹೈದರಾಬಾದ್: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಮೊಮ್ಮಗನೊಬ್ಬ ತನ್ನ ತಾತನನ್ನೇ 70 ಬಾರಿ ಇರಿದು ಕೊಂದಿರುವ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆಸ್ತಿ ಹಂಚುವಲ್ಲಿ ಅನ್ಯಾಯವಾಗಿದೆ ಎಂಬ ಸಿಟ್ಟಿನಿಂದ ಹೈದ್ರಾಬಾದ್‌ನ ಖ್ಯಾತ ಉದ್ಯಮಿ ವೆಲಮತಿ ಚಂದ್ರಶೇಖರ ಜನಾರ್ದನ ರಾವ್(86 ವರ್ಷ) ಅವರನ್ನು 29 ವರ್ಷದ ಮೊಮ್ಮಗ ಕಿಲಾರು ಕೀರ್ತಿ ತೇಜಾ ಚಾಕುವಿನಿಂದ 70 ಬಾರಿ ಇರಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿಯ ಮನೆಯಲ್ಲಿಯೇ ಈ ಘಟನೆ ನಡೆದಿದ್ದು, ಭಾರೀ ಮಾತಿನ ಚಕಮಕಿ ಬಳಿಕ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.
ಜನಾರ್ದನ ರಾವ್ ಅವರು ವೆಲ್ಜಾನ್ ಗ್ರೂಪ್‌ನ ಅಧ್ಯಕ್ಷರು. ಆಸ್ತಿ ಹಂಚಿಕೆ ಮಾಡುವಾಗ ತನಗೆ ಹೆಚ್ಚು ಪಾಲು ನೀಡಬೇಕೆಂದು ರಾವ್ ಬಳಿಕ ಅವರ ಮೊಮ್ಮಗ, ಆರೋಪಿ ಕಿಲಾರು ಕೀರ್ತಿ ತೇಜಾ ಕೇಳಿಕೊಂಡಿದ್ದ. ಆದರೆ, ಇದಕ್ಕೆ ರಾವ್ ಅವರು ಒಪ್ಪಿರಲಿಲ್ಲ. ಇದೇ ವಿಚಾರದಲ್ಲಿ ಭಾರೀ ವಾಗ್ವಾದ ನಡೆದ ಬಳಿಕ ತೇಜಾ ಆಕ್ರೋಶಭರಿತನಾಗಿ ತಾತನನ್ನೇ ಚಾಕುವಿನಿಂದ ಚುಚ್ಚಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತನ್ನ ತಾಯಿಯ ಸರೋಜಿನಿ ದೇವಿ ಅವರ ಮುಂದೆಯೇ ತೇಜಾ ಈ ಕೃತ್ಯವೆಸಗಿದ್ದಾನೆ. ಅವರು ತಡೆಯಲು ಯತ್ನಿಸಿದಾಗ ಅವರಿಗೂ ಪುತ್ರ ಇರಿದಿದ್ದಾನೆ. 4 ಕಡೆ ಇರಿದ ಗಾಯಗಳಾಗಿದ್ದು, ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮೆರಿಕದಿಂದ ಬಂದು ಕೊಲೆ
ಆರೋಪಿ ತೇಜಾ ಇತ್ತೀಚೆಗೆ ಅಮೆರಿಕದಲ್ಲಿ ತನ್ನ ಸ್ನಾತಕೋತ್ತರ ಪದವಿ ಪೂರ್ತಿಗೊಳಿಸಿ ಹೈದರಾಬಾದ್‌ಗೆ ಹಿಂತಿರುಗಿದ್ದ. ಆಸ್ತಿ ಕೇಳುವುದಕ್ಕೆ ತಾಯಿ ಸರೋಜಿನಿ ದೇವಿಯೊಂದಿಗೆ ರಾವ್ ಜತೆ ಹೋಗಿದ್ದ. ತೇಜಾಗೆ ಪೂರ್ವಿಕರ ಆಸ್ತಿಯ ಭಾಗವಾಗಿ 4 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇನ್ನೂ ಹೆಚ್ಚಿನ ಆಸ್ತಿಗಾಗಿ ಆತ ತಾತನ ಬಳಿ ಗಲಾಟೆ ಆರಂಭಿಸಿದ್ದಾನೆ. ಇದು ವಿಕೋಪಕ್ಕೆ ಹೋಗಿ ತಾತನ ಕೊಲೆಯಲ್ಲಿ ಅಂತ್ಯವಾಗಿದೆ. ಜನಾರ್ದನ ರಾವ್ ಅವರು ಪ್ರಖ್ಯಾತ ಕೈಗಾರಿಕೋದ್ಯಮಿ. ಅವರು ಹಡಗು ನಿರ್ಮಾಣ, ಹೈಡ್ರಾಲಿಕ್ಸ್ ಸಲಕರಣೆಗಳು, ಇಂಧನ ಮತ್ತು ಕೈಗಾರಿಕಾ ಉಪಯೋಗಗಳಂತಹ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಪರೋಪಕಾರ, ದಾನಕ್ಕೂ ಅವರು ಹೆಸರಾಗಿದ್ದರು. ಎಲೂರು ಸರ್ಕಾರಿ ಆಸ್ಪತ್ರೆ, ತಿರುಮಲ ತಿರುಪತಿ ದೇವಸ್ಥಾನಮ್ಸ್‌ಗೆ ಭಾರೀ ಮೊತ್ತದ ದೇಣಿಗೆಯನ್ನೂ ಅವರು ನೀಡುತ್ತಿದ್ದರು.