ಬೆಂಗಳೂರು: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು, ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್ಸಿನಲ್ಲೇ ಮುಸುಕಿನ ಗುದ್ದಾಟ ನಡೆಯುತ್ತಿರುವ ಮಧ್ಯೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಸುದೀರ್ಘ ಮಾತುಕತೆ ನಡೆಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಬ್ಬರೂ ನಾಯಕರು ಸುಮಾರು 45 ನಿಮಿಷ ಚರ್ಚೆ ನಡೆಸಿದ್ದು, ದಲಿತ ಸಿಎಂ ಕೂಗಿನ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಿವಾಸಕ್ಕೆ ಜಿ. ಪರಮೇಶ್ವರ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರಿನಲ್ಲಿಯೇ ತೆರಳಿದರು. ಅಲ್ಲಿ ಉಭಯ ನಾಯಕರು ರಾಜ್ಯ ರಾಜಕೀಯ, ಕರ್ನಾಟಕ ಕಾಂಗ್ರೆಸ್ ಬಿಕ್ಕಟ್ಟು, ಡಿನ್ನರ್ ಪಾಲಿಟಿಕ್ಸ್, ದಲಿತ ಮುಖ್ಯಮಂತ್ರಿ ಕೂಗು ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ಇದೊಂದು ಸೌಜನ್ಯದ ಭೇಟಿ ಎಂದಷ್ಟೇ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒಂದು ಬಣ ತಂತ್ರ ಹೂಡಿದೆ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಅವರ ಆಪ್ತರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅತ್ತ, ಡಿಕೆಶಿ ಆಪ್ತರು ಅಧಿಕಾರ ಹಂಚಿಕೆ ಪ್ರಸ್ತಾಪಿಸುತ್ತಿದ್ದಾರೆ. ಡಿನ್ನರ್ ಪಾಲಿಟಿಕ್ಸ್ ಮೂಲಕವೂ ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಗೆ ತಂತ್ರ ನಡೆದಿತ್ತು.
ದಲಿತ ಸಿಎಂ ಕೂಗು ಕೂಡ ಕೇಳಿಬಂದಿತ್ತು. ಆಗ ಮಧ್ಯಪ್ರವೇಶಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಬಾಯಿ ಮುಚ್ಚಿಕೊಂಡಿರಿ ಎಂದು ಖಡಕ್ ಸಂದೇಶ ರವಾನಿಸಿದ್ದರು. ಇದರ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ. ಪರಮೇಶ್ವರ ಅವರ ಭೇಟಿಯು ಚರ್ಚೆಗೆ ಗ್ರಾಸವಾಗಿದೆ.