ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಚಾರಿತ್ರಿಕ ಗೆಲುವು ಸಾಧಿಸಿದೆ. ಕಳೆದ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷವು ಸೋಲುಂಡಿದೆ. ಖುದ್ದು ಅರವಿಂದ್ ಕೇಜ್ರಿವಾಲ್ ಅವರೇ ಸೋಲನುಭವಿಸಿದ್ದಾರೆ. ಇದರ ಬೆನ್ನಲ್ಲೇ, ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿದೆ. ಇಂಡಿಯಾ ಒಕ್ಕೂಟದ ಸದಸ್ಯರಾಗಿರುವ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(Omar Abdullah) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೆಚ್ಚೆಚ್ಚು ಜಗಳವಾಡಿಕೊಂಡು, ಒಬ್ಬರ ನಡುವೆ ಇನ್ನೊಬ್ಬರು ಕಿತ್ತಾಡಿಕೊಂಡೇ ಇರಿ. ನಿಮ್ಮ ನಡುವೆಯೇ ಇನ್ನೂ ಜಗಳವಾಡಿರಿ. ಒಬ್ಬರನ್ನು ಮತ್ತೊಬ್ಬರು ಜಗಳದಿಂದಲೇ ಮುಗಿಸಿಬಿಡಿ ಎಂದು ಒಮರ್ ಅಬ್ದುಲ್ಲಾ ಅವರು ಪೋಸ್ಟ್ ಮಾಡಿದ್ದಾರೆ .
ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ರಚಿಸಿಕೊಂಡಿರುವ ಇಂಡಿಯಾ ಒಕ್ಕೂಟದ ಭಾಗವಾಗಿರವ ಒಮರ್ ಅಬ್ದುಲ್ಲಾಅವರು ಪ್ರತಿಪಕ್ಷಗಳ ನಾಯಕರ ಆಂತರಿಕ ಕಾದಾಟ ಹಾಗೂ ಮೈತ್ರಿಕೂಟದಲ್ಲಿಪ್ರಾಬಲ್ಯಕ್ಕಾಗಿ ತೆರೆಮರೆಯ ಕುತಂತ್ರಗಳಿಂದ ಬೇಸತ್ತು ಈ ರೀತಿಯ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಜತೆಗೆ ಕೈಜೋಡಿಸದೆಯೇ ಏಕಾಂಗಿ ಸ್ಪರ್ಧಿಸಿದ ಕೇಜ್ರಿವಾಲ್ ಅವರು ದೆಹಲಿ ಗದ್ದುಗೆಯನ್ನು ತ್ಯಜಿಸಿದ್ದಾರೆ. ಹಾಗಾಗಿಯೇ, ಪ್ರತಿಪಕ್ಷಗಳ ನಡುವೆ ಮೂಡದ ಒಮ್ಮತಕ್ಕೆ ಒಮರ್ ಅಬ್ದುಲ್ಲಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.