ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಯಾದ ಬಳಿಕ ಅಂದರೆ ಆಗಸ್ಟ್‌ನಿಂದ 152 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. 23 ಹಿಂದೂಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಪ್ರಕರಣಗಳ ಕುರಿತು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 2024 ನವೆಂಬರ್ 26ರಿಂದ 2025ರ ಜನವರಿ 25ರವರೆಗೆ ಅಲ್ಲಿರುವ ಹಿಂದೂಗಳ ವಿರುದ್ಧ 76 ದಾಳಿ ಪ್ರಕರಣಗಳು ವರದಿಯಾಗಿವೆ ಎಂದಿದ್ದಾರೆ. ಅಲ್ಲದೆ, ಅಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಘಟನೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. 2024ರ ಡಿಸೆಂಬರ್ 9ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ, ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭಾರತದ ನಿರೀಕ್ಷೆಗಳೇನೆಂದು ಮನವರಿಕೆ ಮಾಡಿದ್ದಾರೆ ಎಂದೂ ತಿಳಿಸಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಸಂಬಂಧಿಸಿದ 88 ಪ್ರಕರಣಗಳಲ್ಲಿ 70 ಜನರನ್ನು ಬಂಧಿಸಲಾಗಿದೆ ಎಂದು 2024ರ ಡಿಸೆಂಬರ್ 10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾದೇಶ ಸರ್ಕಾರ ಹೇಳಿತ್ತು. ಶೇಖ್ ಹಸೀನಾ ನೇತೃತ್ವದ ಬಾಂಗ್ಲಾ ಸರ್ಕಾರ ಪತನಗೊಂಡ ಬಳಿಕ ಅಲ್ಲಿ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಸೀನಾ ದೇಶಬಿಟ್ಟು ಪರಾರಿಯಾಗುತ್ತಿದ್ದಂತೆ ಬಾಂಗ್ಲಾದಲ್ಲಿ ಭಾರೀ ಹಿಂಸಾಚಾರ ನಡೆಸಿದ್ದು, ಹಲವು ಹಿಂದೂಗಳ ಮನೆಗಳು, ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.