ನವ ದೆಹಲಿ: ಆಪ್ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ತಮ್ಮ ಗಟ್ಟಿ ನೆಲೆಯಾಗಿದ್ದ ನವ ದೆಹಲಿ ಕ್ಷೇತ್ರದಲ್ಲಿ ಭಾರೀ ಸೋಲನ್ನು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ, ಮಾಜಿ ದೆಹಲಿ ಮುಖ್ಯಮಂತ್ರಿ ಸಾಹೇಬ್ ಸಿಂಗ್ ವರ್ಮಾ ಅವರ ಪುತ್ರ, ಕೇಜ್ರಿವಾಲ್ ಅವರನ್ನು 3,182 ಮತಗಳ ಅಂತರದಿಂದ ಮಣಿಸಿದ್ದಾರೆ.
ಕೇಜ್ರಿವಾಲ್ ಅವರ ಸೋಲು ಆಮ್‌ಆದ್ಮಿ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಜತೆಗೆ 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿಗೆ ಚೈತನ್ಯ ಸಿಕ್ಕಿದೆ. ಕೇಜ್ರಿವಾಲ್ 2013ರಲ್ಲಿ ಮೊದಲ ಬಾರಿಗೆ ನವ ದೆಹಲಿ ಕ್ಷೇತ್ರದಲ್ಲಿ ಗೆದ್ದು, ಹಿರಿಯ ಕಾಂಗ್ರೆಸ್ ನಾಯಕ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ್ದರು. 2015 ಮತ್ತು 2020 ಚುನಾವಣೆಯಲ್ಲೂ ಭಾರಿ ಮತಗಳ ಅಂತರದಿಂದ ಈ ಸ್ಥಾನ ಉಳಿಸಿಕೊಂಡಿದ್ದರು. ಆದರೆ ಈ ಬಾರಿ ಹಣಕಾಸು ಅಕ್ರಮ ಆರೋಪಗಳು, ‘ಶೀಶ್ ಮಹಲ್’ ವಿವಾದ, ಮತ್ತು ದೆಹಲಿ ಮದ್ಯ ನೀತಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಹೆಸರು ಕೆಡಿಸಿಕೊಂಡಿದ್ದ ಅವರು ಸೋಲು ಅನುಭವಿಸಿದ್ದಾರೆ.
ಪರ್ವೇಶ್ ವರ್ಮಾ, ಎರಡು ಬಾರಿ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ಅವರು ಅದಕ್ಕಿಂತ ಮೊದಲು ಆರ್‌ಎಸ್‌ಎಸ್ ಶಾಖಾ ಪ್ರಮುಖನಾಗಿ ಕೆಲಸ ಮಾಡಿದ್ದರು. ಈ ಬಾರಿ ಕೇಜ್ರಿವಾಲ್ ವಿರುದ್ಧ ಕಣಕ್ಕೆ ಇಳಿದು ಭಾರೀ ಪ್ರಚಾರ ನಡೆಸಿ ನಾಗರಿಕ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪಗಳನ್ನು ಎತ್ತಿ ತೋರಿಸಿ ಗೆದ್ದಿದ್ದಾರೆ.
ವೈರಲ್ ಆದ ವಿಡಿಯೊಗಳು
ಕೇಜ್ರಿವಾಲ್ ಸೋಲಿನ ಮಧ್ಯೆ ಅವರೆ ಹಳೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು. ತಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದು ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದ ವಿಡಿಯೊಗಳು ಅಲ್ಲಿವೆ.
ಇದನ್ನೂ ಓದಿ: Delhi Election Result 2025 : ಆಪ್ ದಿಗ್ಗಜರಿಗೇ ಸೋಲಿನ ರುಚಿ ಉಣಿಸಿದ ಮತದಾರರು?
“ನಾನು ನರೇಂದ್ರ ಮೋದಿಗೆ ಹೇಳಲು ಬಯಸುತ್ತೇನೆ, ನೀವು ನಮ್ಮನ್ನು, ಆಮ್ ಆದ್ಮಿ ಪಕ್ಷವನ್ನು, ದೆಹಲಿಯಲ್ಲಿ ಈ ಜನ್ಮದಲ್ಲಿ ಸೋಲಿಸಲಾಗದು. ನೀವು ಇನ್ನೊಂದು ಜನ್ಮ ತಗೊಳ್ಳಬೇಕು,” ಎಂದು ಕೇಜ್ರಿವಾಲ್ 2023ರಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದು ಹೆಚ್ಚು ವೈರಲ್ ಆಗಿದೆ. 2017ರ ಮತ್ತೊಂದು ವೀಡಿಯೋದಲ್ಲಿ, ಕೇಜ್ರಿವಾಲ್ “ನಾವು ದೆಹಲಿಯ ಮಾಲೀಕರು” ಎಂದು ಹೇಳಿದ್ದರು.