ನವದೆಹಲಿ: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದು, (Delhi Election Results 2025:) ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಪಕ್ಷ ವಿಜಯಪತಾಕೆ ಹಾರಿಸಲಾರಂಭಿಸಿದೆ. ಮತ್ತೊಂದೆಡೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸತತ 3ನೇ ಬಾರಿಗೆ ಶೂನ್ಯ ಸಾಧನೆಯತ್ತ ಹೆಜ್ಜೆಯಿಟ್ಟಿದೆ. ಶನಿವಾರ ಬೆಳಗ್ಗೆ ಮತ ಎಣಿಕೆ ಆರಂಭವಾದಾಗ ಬದ್ಲಿ ಕ್ಷೇತ್ರವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರಾದರೂ, ನಂತರದಲ್ಲಿ ಅಲ್ಲೂ ಹಿನ್ನಡೆ ಅನುಭವಿಸಿ, ಈಗ ಎಲ್ಲ 70 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲಿನ ರುಚಿ ಉಣಲು ಸಜ್ಜಾಗಿದೆ.
2013ರವರೆಗೆ 15 ವರ್ಷಗಳ ಕಾಲ ದೆಹಲಿ ಗದ್ದುಗೆಯನ್ನು ಅಲಂಕರಿಸಿದ್ದ ಕಾಂಗ್ರೆಸ್, ಮತ್ತೆ ದೆಹಲಿಯಲ್ಲಿ ಅಧಿಕಾರ ಹಿಡಿದು ನೆಲೆ ಕಂಡುಕೊಳ್ಳಲು ಈ ಬಾರಿ ಭಾರೀ ಪ್ರಯತ್ನ ನಡೆಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರ ಪ್ರಮುಖರು ಹಲವಾರು ಪ್ರಚಾರ ರಾಲಿಗಳನ್ನು ಆಯೋಜಿಸಿ, ದಿಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಆದರೆ, ಈ ಯಾವ ಶ್ರಮವೂ ಫಲಿಸಲಿಲ್ಲ, ಮತದಾರರು ಕಾಂಗ್ರೆಸ್ ಕೈ ಹಿಡಿಯಲಿಲ್ಲ. ಹೀಗಾಗಿ ಸಮೀಕ್ಷೆಗಳು ಭವಿಷ್ಯ ನುಡಿದಂತೆಯೇ ಈಗ ಕಾಂಗ್ರೆಸ್ ಶೂನ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಇದನ್ನೂ ಓದಿ: Delhi Election 2025
2013ರ ಚುನಾವಣೆಯಲ್ಲಿ ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆಗ ಪಕ್ಷದ ಮತ ಪ್ರಮಾಣ ಶೇ.24.55ರಷ್ಟಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಶೇ.33.07 ಮತಗಳನ್ನು ಗಳಿಸಿದ್ದರೆ, ಆಮ್ ಆದ್ಮಿ ಪಕ್ಷ ಶೇ.29.49ರಷ್ಟು ಮತಗಳನ್ನು ಗಳಿಸಿತ್ತು. 2013ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ 31 ಸೀಟುಗಳಲ್ಲಿ ಜಯ ಸಾಧಿಸಿ, ಮ್ಯಾಜಿಕ್ ಸಂಖ್ಯೆ ತಲುಪಲು ವಿಫಲವಾಗಿತ್ತು. ಆಗ 28ರಲ್ಲಿ ಗೆದ್ದಿದ್ದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿತ್ತು. ಆದರೆ, ಈ ಮೈತ್ರಿಕೂಟವು ಅಧಿಕಾರದಲ್ಲಿ ಉಳಿದಿದ್ದು ಕೇವಲ 49 ದಿನ ಮಾತ್ರ. ಅದಾದ ನಂತರ ನಡೆದ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು. ಈಗ ಮತ್ತೊಮ್ಮೆ ರಾಷ್ಟ್ರೀಯ ಪಕ್ಷವು ಹೀನಾಯ ಸೋಲು ಅನುಭವಿಸಿದೆ.