ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಿ. ಎಸ್.ಯಡಿಯೂರಪ್ಪ ಅವರ ಬಗ್ಗೆ ಯಾವುದೇ ನಾಯಕರು ಕೀಳು ಮಟ್ಟದ ಭಾಷೆ ಬಳಸಿ ಮಾತನಾಡಿದರೆ, ನಾನು ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಪಕ್ಷದ ಸರ್ವೋಚ್ಚ ನಾಯಕರು. ಅವರ ಮಗನಾಗಿ ಮಾತ್ರವಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿಯೂ ನಾನು ಇದನ್ನು ಸಹಿಸುವುದಿಲ್ಲ. ಯಡಿಯೂರಪ್ಪ ರೈತ ಪರ ಹೋರಾಟಗಾರರು. ಅವರು ಮಾಡಿರುವ ಹೋರಾಟದ ಪ್ರತಿಫಲವೇ ಇಂದು ರಾಜ್ಯದಲ್ಲಿ ಬಿಜೆಪಿ ಇಷ್ಟು ಭದ್ರವಾದ ನೆಲೆ ಊರಿದೆ.
ಒಂದು ಕಡೆ ಯಡಿಯೂರಪ್ಪ, ಇನ್ನೊಂದು ಕಡೆ ಅನಂತ್‌ಕುಮಾರ್, ಇಬ್ಬರೂ ಕೂಡ ಜೋಡೆತ್ತುಗಳಂತೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇಂದು ಯಡಿಯೂರಪ್ಪರ ಬಗ್ಗೆ ಹಾದಿ ಬೀದಿಯಲ್ಲಿ ಮಾತನ್ನಾಡುವುದು ಸರಿಯಲ್ಲ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯದಲ್ಲಿ ಕೆಲವೊಬ್ಬ ನಾಯಕರು ಯಡಿಯೂರಪ್ಪ ವಿರುದ್ಧ ಬಹಳ ಕೀಳು ಮಟ್ಟದ ಭಾಷೆಯಲ್ಲಿ ಮಾತನ್ನಾಡುತ್ತಿದ್ದಾರೆ. ಅಂತಹವರಿಗೆ ರಾಜ್ಯದ ಅಧ್ಯಕ್ಷನಾಗಿ ನಾನು ಎಚ್ಚರಿಕೆ ನೀಡುತ್ತೇನೆ. ಇಂತಹ ಕೀಳು ಮಟ್ಟದ ಮಾತುಗಳನ್ನು ಸಹಿಸುವುದಿಲ್ಲ. ಕಠಿಣ ಕ್ರಮಕ್ಕೆ ನಾವು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.