ಕೋಲ್ಕತ್ತಾ: ರಜೆ ಕೊಟ್ಟಿಲ್ಲ ಎಂಬ ಏಕೈಕ ಕಾರಣಕ್ಕೆ ಪಶ್ಚಿಮ ಬಂಗಾಳದ ಸರ್ಕಾರಿ ನೌಕರನೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳಿಗೆ ಚೂರಿ ಇರಿದಿದ್ದಾನೆ. ಘಟನೆ ಬಳಿಕ, ಆರೋಪಿ ಅಮಿತ್ ಕುಮಾರ್ ಸರ್ಕಾರ್(Amit Kumar Sarkar) ರಕ್ತಸಿಕ್ತ ಚಾಕು ಹಿಡಿದುಕೊಂಡು ಅತ್ತಿತ್ತ ಓಡಾಡುತ್ತಿರುವ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಅಮಿತ್ ಸರ್ಕಾರ್ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿರುವ ಕರಿಗಾರಿ ಭವನದ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಗ್ಗೆ ರಜೆ ತೆಗೆದುಕೊಳ್ಳುವ ವಿಚಾರದಲ್ಲಿ ಸಹೋದ್ಯೋಗಿಗಳೊಂದಿಗೆ ಮಾತಿಕ ಚಕಮಕಿ ನಡೆದಿದ್ದು, ಕೊನೆಗೆ ಅಮಿತ್ ಸರ್ಕಾರ್ ತಮ್ಮಲ್ಲಿದ್ದ ಚೂರಿಯಿಂದ ಸಹೋದ್ಯೋಗಿಗಳಾದ ಜಯದೇಬ್ ಚಕ್ರವರ್ತಿ, ಸಂತನು ಸಾಹಾ, ಸಾರ್ಥಾ ಲತೆ ಮತ್ತು ಶೇಖ್ ಸತಾಬುಲ್‌ಗೆ ಇರಿದಿದ್ದಾರೆ. ಬಳಿಕ ಆ ಚಾಕು ಹಿಡಿದುಕೊಂಡೇ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.ಪ್ರಸ್ತುತ ಆರೋಪಿ ಅಮಿತ್ ಸರ್ಕಾರ್‌ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆತನಿಗೇನಾದರೂ ಮಾನಸಿಕ ಕಾಯಿಲೆ ಇದೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.