ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 5 ದಿನಗಳ ಕಾಲ ಅಂತಾರಾಷ್ಟ್ರೀಯ ಏರ್ ಶೋ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಆದರೆ, ಈ ಏರ್ ಶೋಗೆ ಪಾಲಿಕೆಯಿಂದ ದುಂದು ವೆಚ್ಚ ಮಾಡಲಾಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನಗರದಲ್ಲಿ 5 ದಿನಗಳ ಕಾಲ ಈ ಏರ್ ಶೋ ನಡೆಯಲಿದೆ. ಏರ್ ಶೋಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಇ ಟಾಯ್ಲೆಟ್ ಸ್ಥಾಪನೆಗೆ ಬಿಬಿಎಂಪಿಯಿಂದ ಟೆಂಡರ್ ಕರೆಯಲಾಗಿದೆ. ಈ ತಾತ್ಕಾಲಿಕ ಟಾಯ್ಕೆಟ್ ಗಾಗಿ ಬಿಬಿಎಂಪಿಯು 42 ಲಕ್ಷ ರೂ. ಮೊತ್ತದ ಟೆಂಡರ್ ಕರೆದಿದೆ.
ಈ ಮೂಲಕ ಕೇವಲ 5 ದಿನಗಳಿಗೆ 300 ರಿಂದ 400 ಇ ಟಾಯ್ಲೆಟ್ ಸ್ಥಾಪನೆಗೆ ಬಿಬಿಎಂಪಿ ಮುಂದಾಗಿದ್ದು, ಇದಕ್ಕಾಗಿ ಬರೋಬ್ಬರಿ 42 ಲಕ್ಷ ರೂ. ಖರ್ಚು ಮಾಡಲು ಮುಂದಾಗಿದೆ. ಈಗ ಇ ಟಾಯ್ಲೆಟ್ ಹೆಸರಿನಲ್ಲೂ ಹಣ ಲೂಟಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದಾರೆ. 42 ಲಕ್ಷ ರೂ. ಖರ್ಚು ಮಾಡಿದರೆ, ಹೊಸದಾಗಿ 500ಕ್ಕೂ ಅಧಿಕ ಇ ಟಾಯ್ಲೆಟ್ ಕಬೋರ್ಡ್ ಗಳನ್ನೇ ಖರೀದಿ ಮಾಡಬಹುದು. ಇದು ಬರೀ ಲೂಟಿಯ ಐಡಿಯಾ ಎಂದು ತೆರಿಗೆದಾರರು ಹಿಡಿಶಾಪ ಹಾಕುತ್ತದ್ದಾರೆ.