ಬೆಂಗಳೂರು: ರಾಜ್ಯದಲ್ಲಿನ ಮೂರು ಪಕ್ಷಗಳು ತಮ್ಮ ಕರ್ತವ್ಯ ಮರೆತು ನಡೆಯುತ್ತಿವೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ವಿಪ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕರ್ತವ್ಯ ಮರೆತು ಕೆಲಸ ಮಾಡುತ್ತಿವೆ. ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಆಡಳಿತ ಪಕ್ಷದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಿರೋಧ ಪಕ್ಷಗಳು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆ ಮೂಲೆಯೊಲ್ಲೊಬ್ಬ ಹೇ ಕಳ್ಳ ಅಂತ ಕೂಗ್ತಾನೆ. ಇನ್ನೊಬ್ಬ ಈ ಕಡೆಯಿಂದ ನಿಮ್ಮಪ್ಪ ಕಳ್ಳ ಅಂತ ಕೂಗ್ತಾನೆ. ಇದಾ ಯುವಕರಿಗೆ ನಾವು ಮಾಡುವ ಮಾರ್ಗದರ್ಶನ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದಾ ನಾವು ಭವಿಷ್ಯದ ನಾಯಕರಿಗೆ ಹೇಳುವ ಪಾಠ? ಎಂದು ಪ್ರಶ್ನಿಸಿದ ಅವರು ಪ್ರತಿಯೊಬ್ಬರೂ ತಮ್ಮನ್ನು ತಾವು ವೈಭವೀಕರಿಸಿಕೊಳ್ಳುತ್ತಿದ್ದಾರೆ. ತಮ್ಮನ್ನು ತಾವು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ನನ್ನನ್ನು ಬಿಟ್ಟರೆ ಯಾರೂ ಇಲ್ಲ ಅಂತ ವರ್ತಿಸುತ್ತಿದ್ದಾರೆ. ದೊಡ್ಡ ದೊಡ್ಡ ನಾಯಕರು ಇದ್ದು, ಆಡಳಿತ ನಡೆಸಿದ ರಾಜ್ಯವಿದು. ಆದರೆ, ಇವತ್ತಿನ ಸ್ಥಿತಿ ಕಂಡು ತುಂಬಾ ನೋವಾಗುತ್ತಿದೆ. ಜನಪರವಾಗಿ ಯಾರೂ ಕೆಲಸ ಮಾಡುತ್ತಿಲ್ಲ. ಜನಪರವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.