ವಿಜಯಪುರ: ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತೀವ್ರ ಆತಂಕ ಮೂಡಿಸಿದ್ದ ಮುಸುಕುಧಾರಿಗಳ ಗ್ಯಾಂಗ್ ನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇತ್ತೀಚಿಗಷ್ಟೇ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಚುಚ್ಚಿ ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿ, ಆತನ ಪತ್ನಿಯ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಖತರ್ನಾಕ್ ಮುಸುಕುಧಾರಿಗಳ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ (Vijayapura) ಗಾಂಧಿ ಚೌಕ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಜತ್‌ನ ಪಾರ್ದಿ ಗ್ಯಾಂಗ್ ನ ವಿಠ್ಠಲ ಚವ್ಹಾಣ್, ಸುರೇಶ್ ಚವ್ಹಾಣ್, ಆಕಾಶ್ ರಾವತ್ ಬಂಧಿತ ಖದೀಮರು ಎನ್ನಲಾಗಿದೆ.
ವಿಜಯಪುರ ನಗರದ ಜೈನಾಪೂರ ಲೇಔಟ್, ರಾಜಕುಮಾರ್ ಲೇಔಟ್ ಸೇರಿದಂತೆ ನಗರದಲ್ಲಿ ಕೆಲವು ದಿನಗಳಿಂದ ಮುಸುಕುಧಾರಿಗಳ ಹಾವಳಿ ಹೆಚ್ಚಾಗಿತ್ತು. ಈ ಗ್ಯಾಂಗ್ ನ ಐವರ ಪೈಕಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.