ಚಿಕ್ಕಮಗಳೂರು: ಹಬ್ಬದ ಊಟ ಮಾಡಲು ಹೋಗಿ ತಡೆಗೋಡೆ ಇಲ್ಲದ ಪಾಳು ಬಾವಿಗೆ ಬಿದ್ದು ಮಹಿಳೆಯೊಬ್ಬರು ನರಳಾಡಿದ ಘಟನೆಯೊಂದು ನಡೆದಿದೆ.
ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಡೆದುಕೊಂಡು ಹೋಗುತ್ತಿರುವಾಗ ಪಾಳು ಬಿದ್ದ 50 ಅಡಿ ಆಳದ ಬಾವಿಯೊಳಗೆ ಬಿದ್ದು ಮಹಿಳೆ, ರಾತ್ರಿಯಿಡೀ ನರಳಾಡಿದ್ದಾರೆ.
ಮಹಿಳೆಯ ನರಳಾಟ ಗಮನಿಸಿದ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ, ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯನ್ನು ಚಿಕ್ಕಜಾಜೂರು ಮೂಲದ ತಿಮ್ಮಕ್ಕ (40) ಎಂದು ಗುರುತಿಸಲಾಗಿದೆ.
ತಿಮ್ಮಕ್ಕ ಕೂಲಿ ಕೆಲಸಕ್ಕೆಂದು ತಡಗ ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರ ಮನೆಯ ಹಬ್ಬದ ಊಟಕ್ಕೆಂದು ಬಂದು ಬಾವಿಯೊಳಗೆ ಬಿದ್ದಿದ್ದರು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.