Kiccha Sudeep: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕಿಚ್ಚ ಸುದೀಪ್ ಅವರು ಡಿಕೆಶಿ ಅವರನ್ನು ಭೇಟಿಯಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಹ್ವಾನ ನೀಡಲು ಭೇಟಿ ನೀಡಿದ್ದಾರೆಯೇ ಹೊರತು, ರಾಜಕೀಯ ಅಥವಾ ವೈಯಕ್ತಿಕ ಕಾರಣಗಳಿಗೆ ಅಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರವರಿ 8ರಿಂದ ಸಿಸಿಎಲ್ ಆರಂಭವಾಗಲಿದೆ. ಟೂರ್ನಿಯನ್ನು ಉದ್ಘಾಟಿಸಬೇಕು ಎಂದು ಮನವಿ ಮಾಡಲು ಕಿಚ್ಚ ಸುದೀಪ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 8 ಹಾಗೂ 9ರಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡವು ಮೊದಲ ದಿನ ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ. ಈ ಬಾರಿಯೂ ಕರ್ನಾಟಕ ಬುಲ್ಡೋಜರ್ಸ್ ತಂಡವೇ ಗೆಲ್ಲುವ ಫೇವರಿಟ್ ತಂಡ ಎನಿಸಲಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರೇ ತಂಡದ ನಾಯಕರಾಗಿದ್ದಾರೆ.
2023ರಲ್ಲಿಯೂ ಕಿಚ್ಚ ಸುದೀಪ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಕಿಚ್ಚ ಡಿಸಿಎಂ ಅವರನ್ನು ಭೇಟಿಯಾಗಿದ್ದರು. ಆಗಲೂ ಡಿಕೆಶಿ ಅವರು ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು ಎಂದು ತಿಳಿದುಬಂದಿತ್ತು.