ಬೆಂಗಳೂರು: ಹೆಂಡತಿ ತವರು ಮನೆಗೆ ಹೋಗುವುದು ಬಹುಪಾಲು ಗಂಡಂದಿರ ಪಾಲಿಗೆ ಜೀವನದ ಅತ್ಯಂತ ಸಂತಸದ ಕ್ಷಣ. ಆ ಸಮಯವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಎಲ್ಲರೂ ಈ ಖುಷಿಯನ್ನು ಮನೆಯೊಳಗೆ ಮಾತ್ರ ಹಂಚಿಕೊಳ್ಳುತ್ತಾರೆಯೇ ಹೊರತು ಹೊರಗೆ ಹೇಳಿಕೊಳ್ಳುವುದಿಲ್ಲ. ಹೆಂಡತಿ ಮನೆಯಲ್ಲಿ ಇಲ್ಲದೆ ಬೇಜಾರು ಎಂದೇ ರಾಗ ಎಳೆಯುತ್ತಾರೆ. ಆದರೆ ಇಲ್ಲೊಬ್ಬ ಆಟೋ ಚಾಲಕ ಹೆಂಡತಿ ತವರಿಗೆ ಹೋದ ಖುಷಿಯನ್ನು ತನ್ನ ಗ್ರಾಹಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಪ್ರಸಂಗ ನಡೆದಿದ್ದು ಬೆಂಗಳೂರಿನಲ್ಲಿ.
ಆಟೋ ಚಾಲಕ ತನ್ನ ಪತ್ನಿ ತವರು ಮನೆಗೆ ಹೋಗಿದ ಸಂತೋಷವನ್ನು ವಿನೂತನ ರೀತಿಯಲ್ಲಿ ಆಚರಿಸಿದ ವಿಡಿಯೋ ಸೋಶಿಯಲ್ಲಿ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪತ್ನಿ ಇಲ್ಲದ ಖುಷಿಯನ್ನು ಬರೆದು ತನ್ನ ಆಟೋ ಹಿಂಭಾಗದಲ್ಲಿ ಅಂಟಿಸಿದ್ದಾನೆ.
ಆಟೋದಲ್ಲಿ ಅಂಟಿಸಿರುವ ಲೆಟರ್‌ನಲ್ಲಿʼʼಪತ್ನಿ ತವರು ಮನೆಗೆ ಹೋಗಿದ್ದಾಳೆ. ನನಗೆ ತುಂಬಾ ಖುಷಿಯಾಗಿದೆ” ಎಂದು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಬರೆದಿದ್ದಾನೆ. ಆತನ ಸಂಭ್ರಮ ಅಲ್ಲಿಗೆ ಮುಗಿದಿಲ್ಲ.
ಪ್ರಯಾಣಿಕರಿಗೆ ಬಿಸ್ಕತ್ತು ವಿತರಣೆ
ಆಟೋ ಚಾಲಕ ಪತ್ನಿ ಇಲ್ಲದ ಖುಷಿಗೆ ತನ್ನ ಪ್ರಯಾಣಿಕರಿಗೆಲ್ಲರಿಗೂ ವಿಶೇಷ ಸ್ವಾಗತ ನೀಡಿದ್ದಾನೆ. ತನ್ನ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯ ಮಿಲ್ಕಿ ಬಿಸ್ಕತ್ತು ನೀಡಿ ಖುಷಿ ವ್ಯಕ್ತಪಡಿಸಿದ್ದಾನೆ.
ನೆಟ್ಟಿಗರ ಸಕತ್ ಪ್ರತಿಕ್ರಿಯೆ
ಆಟೋ ಚಾಲಕನ ಖುಷಿ ಎಲ್ಲರ ಗಮನ ಸೆಳೆದಿದೆ. ದೃಶ್ಯವನ್ನು ಗಮನಿಸಿದ ಒಬ್ಬ ಪ್ರಯಾಣಿಕರೊಬ್ಬರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈಗ ಅದು ವೈರಲ್ ಆಗಿದೆ.
ಫೋಟೊದಲ್ಲಿ ಪೋಸ್ಟ್ ಜತೆಗೆ ಬಿಸ್ಕತ್ತು ಪ್ಯಾಕ್‌ನ ಚಿತ್ರವಿದೆ. ಇದನ್ನು ನೋಡಿದ ನೆಟ್ಟಿಗರು ಜೋರಾಗಿ ನಗುವ ಕಾಮೆಂಟ್ ಹಾಕಿದ್ದಾರೆ. ಇಷ್ಟೊಂದು ಖುಷಿ! ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು *”ವಾಹ್, ಆತ ತನ್ನ ಸ್ವಾತಂತ್ರ್ಯ ಅನುಭವಿಸುತ್ತಿದ್ದಾನೆ ಎಂದು ಬರೆದಿದ್ದಾರೆ.
ಇನ್ನೂ ಕೆಲವರು ಈ ವೈರಲ್ ವಿಡಿಯೋ ಆಟೋ ಚಾಲಕನಿಗೆ ತೊಂದರೆ ಮಾಡಬಹುದು ಎಂದು ಅಂದಾಜಿಸಿದ್ದಾರೆ. ʼʼಆತನ ಜೀವನವನ್ನು ನೀವೇ ಹಾಳು ಮಾಡಿಬಿಟ್ಟಿರಿ! ಈ ಸುಖಿ ವ್ಯಕ್ತಿ ಸಂತೋಷದಿಂದಿದ್ದ, ಆದರೆ ಈಗ ಇದು ವೈರಲ್ ಆಗಿ ಹೋದರೆ, ಪತ್ನಿ ನೋಡಿದರೆ, ಆತ ಆಟೋದಲ್ಲೇ ಮಲಗಬೇಕಾಗಬಹುದು” ಎಂದು ಹಾಸ್ಯಾಸ್ಪದ ಕಾಮೆಂಟ್ ಕೂಡ ಬಂದಿದೆ.
ಈ ಆಟೋ ಚಾಲಕನ ವಿಶಿಷ್ಟ ಸಂಭ್ರಮ ಜನರಿಗೆ ನಗೆ ತರಿಸುತ್ತಿದ್ದರೂ, ಆತನ ಪತ್ನಿ ಅದನ್ನು ನೋಡಿದರೆ ಏನಾಗಬಹುದು ಎಂಬುದರ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.