ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ದೆಹಲಿಯಲ್ಲಿ ರೆಬೆಲ್ ನಾಯಕರು ರಣಕಹಳೆ ಊದಿದ್ದಾರೆ. ಇದರ ಬೆನ್ನಲ್ಲೇ, ಬಂಡಾಯ ನಾಯಕರಿಗೆ ತಿರುಗೇಟು ನೀಡಲು ವಿಜಯೇಂದ್ರ ಹಾಗೂ ಬಿಎಸ್ ವೈ ಪರ ನಾಯಕರು ಸಭೆ ನಡೆಸಿದ್ದಾರೆ. ಅಲ್ಲದೆ, ಒಗ್ಗಟ್ಟು ಪ್ರದರ್ಶನಕ್ಕಾಗಿ ಫೆಬ್ರವರಿ 12ರಂದು ಬೆಂಬಲಿಗ ಶಾಸಕರು,ಮಾಜಿ ಸಚಿವರ ಸಭೆ ನಡೆಸಲು ಕೂಡ ತೀರ್ಮಾನಿಸಲಾಗಿದೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ವಿಜಯೇಂದ್ರ ಬೆಂಬಲಿಗರ ಸಭೆ ನಡೆಸಲಾಗಿದೆ. ಮಾಜಿ ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ವೈ.ಸಂಪಂಗಿ, ಹರ್ಷವರ್ಧನ್, ನಿರಂಜನ್ ಸೇರಿ ಹಲವರು ಪಾಲ್ಗೊಂಡಿದ್ದು, ಭಿನ್ನಮತೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಘನತೆಗೆ ಧಕ್ಕೆ ತರುತ್ತಿರುವ ಭಿನ್ನರನ್ನು ಕೂಡಲೇ ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಸಭೆಯ ಬಳಿಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. ಬಂಡಾಯದ ಮೂಲಕ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ನಾಯಕರನ್ನು ಮುಲಾಜಿಲ್ಲದೆ ಹೊರಹಾಕಬೇಕು. ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ.ಹರೀಶ್, ಕುಮಾರ್ ಬಂಗಾರಪ್ಪ ಸೇರಿ ಎಲ್ಲ ಬಂಡಾಯ ನಾಯಕರನ್ನು ಹೊರಹಾಕಬೇಕು. ಇಲ್ಲದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ತಟಸ್ಥರ ಸೆಳೆಯಲು ಯತ್ನಾಳ್ ಬಣ ಪ್ಲಾನ್
ಬಿ.ವೈ.ವಿಜಯೇಂದ್ರ, ಬಿಎಸ್ ವೈ ಬಣದಲ್ಲೂ ಇರದ, ಬಂಡಾಯ ನಾಯಕರ ಗುಂಪಿನಲ್ಲೂ ಇರದೆ ತಟಸ್ಥ ನಿಲುವು ತಾಳಿರುವ ನಾಯಕರಿಗೆ ಯತ್ನಾಳ್ ಬಣವು ಗಾಳ ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ, ದೆಹಲಿಯಲ್ಲಿ ಯತ್ನಾಳ್ ಸೇರಿ ಹಲವು ನಾಯಕರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಬೆಂಬಲ ಕೋರಿದ್ದಾರೆ. ಇದಾದ ಬಳಿಕ ತಟಸ್ಥರಿಗೆ ಯತ್ನಾಳ್ ಬಣವು ಗಾಳ ಹಾಕಿರುವ ಕುರಿತು ಸುದ್ದಿಗಳು ಹರಿದಾಡುತ್ತಿವೆ.